ಮಾತಿನ ಚಾಟಿಗಿಂತ,
ಮೌನದ ಸವರು ಆಘಾತಕಾರಿ
ಚುಚ್ಚು ಮುಳ್ಳಿಗಿಂತಲೂ ಭಯಾನಕ,
ಚುಚ್ಚುವುದೆಂಬ ಗಾಬರಿ
ಹೂವಿನಂತೆ ತಲೆಯೇರಿ
ಭಾರವಾಯ್ತು ಒಲವೆಂಬ ಮಕ್ಕರಿ
ನನ್ನ ಪಾಡು ನನ್ನದು
ನನ್ನ ಗೋಳಿಗೆ ನೀವ್ಯಾಕೆ ಬಿಕ್ಕಿರಿ ?!!
ಅದೇನು ಯೋಚಿಸುತ್ತ ಕೂತಿರಿ
ಬೇಗನೆ ಎಲೆ ಹಾಕಿರಿ
ತಡವಾಗಿದೆ ಮನೆಯಲ್ಲಿ
ಕಾಯುತಿಹಳು ಕಿನ್ನರಿ
ಸೋತ ಮುಸುಡಿ ಕಂಡೊಡನೆ
ಊಟಕ್ಕೆ ಹಾಕುವಳು ಕತ್ತರಿ
ಜೇಬು ಜಣಗುಡಲು ನಕ್ಕು
ಸತ್ಕರಿಸುವ ಬಿತ್ತರಿ
ನೆನೆಯ ಬೇಕು ಸಾಯೋ ತನ್ಕ
ಆ ಮಧುರ ರಾತಿರಿ
ನಿಮ್ಮ ಆಲೋಚನೆ ಸರಿಯಿಲ್ಲ
ದಯವಿಟ್ಟು ತಿದ್ದುಕೊಳ್ಳಿರಿ
ಜೂಜು-ಮೋಜು ನಮಗೆ ಮಾತ್ರ
ಹೆಂಗಸರ ಕೇಳಿ ನೋಡಿರಿ
ಕೈಗೆ ಕೊಂಡ ಪೊರಕೆ ಏಟು
ಬೀಳದಂತೆ ಓಡಿರಿ
ಇಷ್ಟಕ್ಕೆ ನಮ್ಮ ಸ್ನೇಹ
ಮುಗಿಯಿತೆಂದರ್ಹೇಗೆ ರೀ
ಮತ್ತೊಂದಿನ ಮತ್ತೊಂದಾಟಕೆ
ಎಲ್ಲ ಸೇರಿರಿ
ಸೋತು ಗೆದ್ದು, ಗೆದ್ದು ಸೋತು
ಸಮತೋಲನ ಕಾಣಿರಿ
ಎಲ್ಲರೂ ಸೇರಿ ಈ ಗೀತೆಗೆ-
- ಜೈ ಅನ್ನಿರಿ
ಆ ಒಂದ್ಸಾರಿ, ಆ ಎರ್ಡ್ ಸಾರಿ, ಆ ಮೂರ್ ಸಾರಿ..............
--ರತ್ನಸುತ