-ಏಕಾಂಗಿ ಕೋಣೆ
ಒಂದು ಬದಿಗೆ ಚತುರ ಕುವರ
ಮತ್ತೊಂದು ಬದಿಯಲಿ ಮೌನ ಚತುರಿ
ಗುಟ್ಟಿನ ಪದ ಪಿಸುಗುಟ್ಟಿಗೆ
ಶುರುವಾಯಿತು ಕುರುಡು ಸಂದರ್ಶನ
ಇರದ ಆಕಾರದ ಊಹೆ
ಧನಿಯ ಧಾಟಿಗೆ ಹುಸಿ ದರ್ಶನ
ಗೊಂದಲದಲಿ ಮೊದಲಾಗಿ
ಸುದಾರಿಸಿದ ಮಾತಿನ ಮುಂದೂಡಿಕೆ
ಒಬ್ಬೊಬ್ಬರ ಪರಿಚಯಾಕಾಂಕ್ಷ ಮಾತು
ಮತ್ತೊಬ್ಬರ ವಿಚಾರ ಹೊದಿಕೆ
ಭಾವುಕತೆಯ ಕಥೆಯ ಅಂಚಲಿ
ಜಾರಿದ ಬಿಕ್ಕಳಿಕೆ ಸದ್ದು
ದೂರುಳಿದೇ ಮುಂದಾದ ಕೈಗಳು
ಗಾಳಿಯನ್ನೇ ಮಾಡಿದವು ಮುದ್ದು
ಎಲ್ಲೋ ಮೊದಲಾದರೂ ಕೊನೆಗೆ
ಒಮ್ಮತದಲ್ಲೇ ತಲುಪಿದ ವಾದ
ಅಪಸ್ವರದ ನಡುವೆಯೂ
ಹೊಂದುತ್ತಲಿದ್ದ ಜೋಡಿ ನಾದ
ನೋಡು-ನೋಡುತ ವಾಲಿಕೊಂಡರು
ಇದ್ದಲ್ಲಿಯೇ ಈರ್ವ ಮಡಿಲುಗಳಲ್ಲಿ
ಹೆಚ್ಚು ಕಾಲ ಉಳಿಯದ ಸಡಗರ
ಘೋರ ಬೆಳಕು ಹರಿಯಿತಲ್ಲಿ
ನೋಟ ಬೆರೆಯಿತು, ಊಹೆ ಹುಸಿಯಿತು
ಅಂತರವು ಅನಂತವಾಯಿತು
ಕತ್ತಲಿಟ್ಟ ಸಿರಿಯ ಸಂಭ್ರಮ
ಬೆಳಕು ಹರಿದು ಕಸಿಯಿತು
ಅಭಿಪಾಯ ಬಿನ್ನವಾಗಿ, ಅಭಿರುಚಿಗಳು ಖಿನ್ನವಾಗಿ
ವಿರಹವೇ ಆವರಿಸಿತು, ಮಾತು-ಮಾತಿಗೆ ಮೂಡಿ ಮುನಿಸು
ಕುರುಡು ಕತ್ತಲೇ ಹಿತವಾಗಿರಲು, ಬೆಳಕು ಬಾಳನು ಮಿತವಾಗಿಸಿತು
ನಗ್ನವಾಯಿತು ಸತ್ಯ, ಭಘ್ನವಾಯಿತು ಕಂಡ ಕನಸು....
--ರತ್ನಸುತ
ಒತ್ತಡಕ್ಕೆ ಮಣಿದು ಮದುವೆಯಾಗುವ ಜೋಡಿಗಳಲ್ಲಿ ಹಲವು ಬಾರಿ ವಿರಸ ಮೂಡುತ್ತದೆ. ಸಂಸಾರದ ರಾಗ ಅಪಸ್ವರವೇದ್ದಾಗ ಅದು ಮತ್ತೆ ಸುಸ್ವರವಾಗುವುದೇ ಅಪರೂಪ. ಒಳ್ಳೆಯ 'ಆ ಕೋಣೆಯ' ಕವನ ಸಾದೃಶ್ಯವಾಗಿದೆ.
ReplyDelete