ಮಾಧವನ ಉಸಿರಲ್ಲಿ ಬೆರೆತಳಾ ರಾಧ
ಕೊಳಲಿಂದ ಹೊಮ್ಮಿಸುತ ಶೃಂಗಾರ ನಾದ
ಹೂ ಬನದ ಅಂಗಳದಿ ಮಾಧುರ್ಯ ಗಾನ
ಚಿಟ್ಟೆ, ಗಿಣಿ, ನವಿಲುಗಳಿಗಲ್ಲಿ ನಿರ್ಬಂಧ
ಆಗಸದ ತೆರೆ ಎಳೆದ ಸಾಲು ಮೋಡಗಳು
ಘರ್ಷಣೆಯ ಕಾರಣಕೆ ಮಿಂಚು ಮೂಡಿರಲು
ಬೆಚ್ಚಿದಳು ರಾಧೆ, ಕಂಪಿಸಿತು ತನುವು
ಗೆಜ್ಜೆ ಝಲ್ಲೆಂದೊಡನೆ ಮಾಧವಗೆ ದಣಿವು
ರೆಪ್ಪೆ ಬಿಡದೇ ಬಡಿದು ನಾಚಿಹುದು ಮಾಧವನ -
- ನೇರ ಮಾದಕ ನೋಟವ ಹಾಗೆ ತಡೆದು
ಸುರಿದ ಮಳೆ ಚಳಿ ಹಿಡಿಸಿದರೂ ನಡುಗದ ಅಧರ
ನಡುಗುತಿದೆ ಇನಿಯನ ಆಲಿಂಗನವ ಪಡೆದು
ಮೊಗ್ಗಿಗೆ ಹಿಗ್ಗಿ ಹೂವಾಗುವ ಮನಭಾರ
ಬಳ್ಳಿಗೆ ಹೂವುಗಳ ಹೊತ್ತು ಮೈಭಾರ
ಕರಗಿದ ಮುಗಿಲ ಮರೆ ನೀಲಿಗೆ ಕಂಡಿತು
ಮದನ ಲೀಲೆಯ ಮೋಹಕ ಪ್ರಸಾರ
ಬೆವರಿಳಿಕೆಯಲಿ ಹಗುರಗೊಂಡಿತು ಮೋಹ
ಶಮನಗೊಂಡಿರಲು ವದನದೊಳ ಜ್ವಾಲೆ
ಒಂದೆಡೆ ಸಂವಾದ ನಡೆಸುತ್ತಿತ್ತು ಮೌನ
ಸದ್ದಿನಲೂ ನಿರ್ಲಕ್ಷಿತ ಮೇಘ ಮಾಲೆ ........
(ಈ ಕವನದಲ್ಲಿ ಯಾವುದೇ ರೀತಿಯ ತಪ್ಪುಗಳು ಕಂಡುಬಂದಲ್ಲಿ ನನ್ನನ್ನು ಕ್ಷಮಿಸಿ)
--ರತ್ನಸುತ
ಪ್ರೀತಿಯ ಉತ್ತುಂಗದ ಜಗದ್ವಿಖ್ಯಾತ ಪ್ರತಿಮೆಗಳನ್ನು ಇಲ್ಲಿ ಅನಾವರಣಗೊಳಿಸಿದ ರೀತಿ ಕಾವ್ಯಮಯವಾಗಿದೆ. ಪ್ರೇಮ ಸಲ್ಲಾಪ ಕಣ್ಣಿಗೆ ಕಟ್ಟುವಂತಿದೆ.
ReplyDelete"ಬೆವರಿಳಿಕೆಯಲಿ ಹಗುರಗೊಂಡಿತು ಮೋಹ" ಆಹಾ ರಸಿಕೋತ್ತ್ಮ ಕವಿಯೇ....