Saturday, 25 May 2013

"ಇದೊಂದು ಪ್ರೇಮ ಕಾವ್ಯ??"




















ಆಕೆಯ ಮೆಚ್ಚಿದ್ದು ಬರೇ ಕಣ್ಣುಗಳ ನೋಡಿ
ಅರಿತುಕೊಂಡದ್ದು ಮೌನ ಧೀರ್ಘ ಚರ್ಚೆ ಮಾಡಿ
ಇದ್ದಲ್ಲೇ ಹಿಂಬಾಲಿಸುತಿತ್ತವಳ ಈ ಹೃದಯ
ಮುಂದೆನಾಗಿರಬಹುದು?? ನೀವೇ ಊಹೆ ಮಾಡಿ!!!

ಎದುರಾಗುವ ಅನಿರೀಕ್ಷಿತ ಕಂಪನದ ಗಳಿಗೆ
ಇಬ್ಬರ ಎದೆಯಲ್ಲೂ ಒಂದೇ ಧಾಟಿಯ ಬಡಿಗೆ
ಅಸಹಜತೆಯ ಸಹಜತನ ಸ್ಪಷ್ಟ ಗೋಚರಿಸಿದರೂ
ಒಪ್ಪಲು ನಕಾರ ಎಳೆದ ಪ್ರಣಯ ಬೀಸಣಿಗೆ

ಭಾವ ಬರೆಯಲಂತು ರಾಶಿ-ರಾಶಿ ಕರೆಯೋಲೆಗಳ
ತಿಳಿಯದೇಕೆ ಅದಕೆ? ಆಕೆ ನೆಲೆಸಿರುವಳು ಇಲ್ಲೇ
ಆಕೆಯ ನೋಯಿಸಿದೆನೆಂಬ ಸಂಶಯದ ಚಿವುಟು
ಕಾಡಿದ ವಿಸ್ತಾರವನ್ನು ನಾನು ಮಾತ್ರ ಬಲ್ಲೆ

ಅದೆಷ್ಟು ಬಾರಿ ಎಡವಿಹೆನೋ ಆಕೆಯ ಗುಂಗಲ್ಲಿ
ಆದ ನೋವು ಅವಳ ನೆನೆಪ ಸವಿಯ ಮುಟ್ಟಲಾದೀತೇ?!!
ದಾಹವೆಂದು ಅಂಗಲಾಚಿ ಬೊಗಸೆ ಹಿಡಿದ ತಿರುಕ ನಾ
ಅಮೃತ ಪಾನವ ನೀಡಿದ ಆಕೆ ಪ್ರೇಮ ದೇವತೆ

ನಿವೇದಿಸಿಕೊಳ್ಳಲು ಆಗದ ಈ ಒದ್ದಾಟವೇ
ಜಾತಕದಲಿ ಗೀಚಲಾದ ಮಹೋನ್ನತ ಸಾಧನೆ
ಸಾಧನೆಯ ಹಾದಿಯೇ ಇಷ್ಟು ರೋಮಾಂಚಕ
ಇನ್ನೆಷ್ಟು ರಮಿಸಬಹುದು ಆ ಪ್ರೇಮ ನಿವೇದನೆ

ನಾಚಿದಕ್ಷರಗಳ ಗೀಚುತ ಮುಂದ್ಹರಿಸುತಲಿ
ಕೊನೆಗೆ ಅನಿಸತೊಡಗಿತು, "ಇದೊಂದು ಪ್ರೇಮ ಕಾವ್ಯ??"
ನಾನೇ ಬರೆದೆನೇ? ಎಂಬ ಗೊಂದಲವಿದೆ ನನ್ನೊಳಗೆ
ಆಕೆ ಬರೆಸಿರಬಹುದೆನ್ನುವುದಾದರೆ ಸತ್ಯ...........


                                                --ರತ್ನಸುತ

1 comment:

  1. "ಆಕೆ ಬರೆಸಿರಬಹುದೆನ್ನುವುದಾದರೆ ಸತ್ಯ..........." ಎನ್ನುವುದಂತೂ ನಿಜ.

    ನಮ್ಮ ಹಳೇ ಪ್ರೇಮ ಪುರಾಣಗಳನ್ನು ಮೆಲುಕು ಹಾಕುವಂತೆ ಕವಿತೆ ಬರೆದುಕೊಟ್ಟಿದ್ದೀರಾ. ನನ್ನ ಅಂದಿನ ಪ್ರೇಮ ಫಲಕೊಡದೇ ಮುದುಡಿ ಹೋಯಿತು. ಈಗ ಎಲ್ಲೋ ಮಕ್ಕಳನ್ನು ಹೆತ್ತು ಸುಖವಾಗಿ ಸೆಟಲ್ ಆಗಿದ್ದಾಳು ಆಕೆ! :(

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...