Friday, 17 May 2013

ಪೆದ್ದು-ಮುದ್ದು ಜೋಡಿ





















ಕೋಪಗೊಂಡ ನಿನ್ನ ಕೆನ್ನೆ ಮೋಹಗೊಂಡ ನನ್ನ -
- ಕಣ್ಣಿಗೇನೋ ಹೇಳುತ್ತಿದೆ ಅನರ್ಥ ಭಾಷೆಯಲ್ಲಿ
ಮೌನವಹಿಸಬೇಡ ಹೀಗೆ, ಏನನ್ನಾದರೂ ಗುನುಗು
ಬೈಗುಳವಾದರೂ ಸರಿಯೇ ಸ್ವಾಗತಿಸುವೆ ನಗುವಿನಲ್ಲಿ

ಕಾಯಿಸು ಈ ನಿರುದ್ಯೋಗಿಯ ಮರೆತು ಸಮಯ ಪ್ರಜ್ಞೆ
ಕಾಯುವಿಕೆಯಲ್ಲಾದರೂ ನಾ ನಿರತನಾಗುವಂತೆ
ರಾಮನಾಗಲಾರೆ, ನೀನಿದ್ದಂತೆಯೇ ಇಷ್ಟ ಪಡುವೆ
ಸ್ವೀಕರಿಸು ಒಪ್ಪುತ ನನ್ನ ಭರತನಂತೆ

ಎಣಿಸಲೇಕೆ ತಾರೆಗಳ? ಸೆಡ್ಡು ಹೊಡೆಯಬಲ್ಲ ನಿನ್ನ -
- ಕಣ್ಗಳನ್ನೇ ಮತ್ತೆ, ಮತ್ತೆ ಎಣಿಸುತ್ತ ಮಘ್ನನಾಗಲೇ ?!!
ಜೀವಮಾನವೆಲ್ಲ ನಿನ್ನ ಮುತ್ತಿಗಾಗಿ ಪರಿತಪಿಸಿ
ಸಿಕ್ಕ ವೇಳೆ ತಪಸ್ಸಿಗೆ ಅಲ್ಪ ಮುಕ್ತಿ ನೀಡಲೇ ??

ಎಟುಕದ ಮನದ ಕಿಟಕಿಯ ಬಾಗಿಲನ್ನು ತೆರೆದಿಡು
ಸಾಧ್ಯವಾದರೆ ಒಮ್ಮೆ ಇಣುಕಿ ನೋಡಿ ನಲಿಯುವೆ
ನಿನ್ನರಿಯುವ ತವಕ ನನಗೆ ನೀಗದ ಹಸಿವಾಗಿರಲಿ
ನನ್ನ ಬಾಳ ಸಕಲವನ್ನೂ ನಿನಗೊಪ್ಪಿಸಿ ಮರೆಯುವೆ

ದಿಟ್ಟದ ಮನ ಮುಟ್ಟುವ ತನ ಕಟ್ಟುವೆ ಹಾಡೊಂದನು
ಇತ್ತಣ ಭುವಿ , ಅತ್ತಣ ಗುರಿ ಹತ್ತುವೆ ಬಾನೆತ್ತರ
ನೀನಿರುವೆಯಾ ಹೇಳು ಅಜ್ಞಾತ ಗೆಳೆಯನ ಜೊತೆ ?
ನೀಡಬಲ್ಲೆ ನಿರಾಯಾಸದಿ ಬಾಳಿಗುತ್ತರ........


                                                --ರತ್ನಸುತ

2 comments:

  1. ಅದೆಲ್ಲ ಸರಿ, ಓದಿದ ಮೇಲೆ ಆಕೆ ಏನೆಂದು ಉತ್ತರಿಸಿದಳು ಭರತ ಮುನಿ? ಸಂಗಮವಾಯಿತೇ? ಗುರಿ ಹತ್ತಿತೇ?

    ReplyDelete
  2. ರಾಮನಾಗಲಾರೆ, ನೀನಿದ್ದಂತೆಯೇ ಇಷ್ಟ ಪಡುವೆ
    ಸ್ವೀಕರಿಸು ಒಪ್ಪುತ ನನ್ನ ಭರತನಂತೆ - ತುಂಬಾ ಚನ್ನಾಗಿದೆ... ಹಿಡಿಸಿತು!

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...