ಮತ್ತದೇ ಮಾತು, ಮತ್ತದೇ ಜಗಳ
ಪರಿಚಯದ ಹೊಸ್ತಿಲಲಿ ಹೀಗಿರಲಿಲ್ಲ
ಮತ್ತದೇ ಮೌನ, ಮತ್ತದೇ ವಿರಸ
ನಡುವೆ ಬೆಳೆದ ಅಂತರ ಕರಗಲಿಲ್ಲ
ಮತ್ತದೇ ಮುನಿಸು, ಮತ್ತದೇ ಕೊರಗು
ಒಬ್ಬರಿಗೊಬ್ಬರು ನೆರವಾಗಬೇಕಿತ್ತು
ಮತ್ತದೇ ಜಿದ್ದು, ಕ್ಷಮೆಗಿಡದ ಸದ್ದು
ಮನಸ್ತಾಪದೊಳಗೊಂದು ವಿಷಬರಿತ ತುತ್ತು
ಅದೃಶ್ಯ ಪ್ರೀತಿ, ಆಲಸ್ಯ ಬಾಳ್ವೆ
ದಿಂಬಿಗೂ ಮಂಚಕೂ ದೂರದಲ್ಲೇ ಸರಸ
ಮಾರುದ್ದ ಸಹನೆ, ಊರುದ್ದ ಕಿಚ್ಚು
ನಗುವನ್ನೇ ಬಿಂಬಿಸದ ಕನ್ನಡಿಯ ಕಳಶ
ಇಬ್ಬಾಗ ಕೋಣೆ, ಮುಂಬಾಗ ಮುಸುಕು
ಜ್ವಲಿದ ಬೆಂಕಿಗೆ ಮಣಿದ ಆತ್ಮಾನುಬಂಧ
ಅತಿ ವೇಗ ಕೋಪ-ಶರ, ಇಂಪಿಸದ ಪ್ರೇಮ ಸ್ವರ
ಅರ್ಥ ಕಳೆದುಕೊಂಡ ಋಣಾನುಬಂಧ
ಕಾಮದೋಣಿಯ ಬಿರುಕು, ಜೀವ ವೀಣೆಯ ಮಿಡಿತ -
- ಕರ್ಕಶದ ಜೋಳಿಗೆಯ ತುಂಬು ಕವಳದ ಕಾಳು
ಮಾನವೀಯತೆ ಮರೆತ ಕೆನ್ನೆಗಂಟಿದ ಬೆರಳು
ಒಗ್ಗೂಡಿ ವಿಚ್ಛೇದಿಸಲು ಹೋರಟ ಬಾಳು
ವೇದ ಘೋಶದ ನಡುವೆ ಬೆಸೆದ ನಂಟಿನ ಗಂಟು
ವಾದ ಮಂಡನೆ ಮುಂದೆ ಸಡಿಲಗೊಂಡಿರಲು
ನ್ಯಾಯ ದೇವತೆಯೂ ಒಮ್ಮೆ ಕಣ್ಬಿಟ್ಟು ನೋಡಿದಳು
ಪರಿಚಯದ ಅಪರಿಚಿತ ಎರಡು ದೇಹಗಳು
ಹರಿದು ತೀರದ ಎರಡು ತುದಿ ಸೇರಿತು ಅಲೆ
ಇದ್ದ ಪ್ರೇಮ ಕಡಲ ತವರನ್ನು ತೊರೆದು
ಎಂದಾದರು ಮುಂದೆ ಒಂದಾಗಬಹುದೇ?
ಪ್ರಶ್ನೆಯೊಂದಿಗೆ ನಿಲ್ಲಿಸಿದೆ ಇಷ್ಟು ಬರೆದು......
--ರತ್ನಸುತ
'ಬದುಕು' - ಪದದ ಅರ್ಥ ಅರಿವಾಗುವ ಮುನ್ನ ಪ್ರೀತಿ ನಿರ್ಲಕ್ಷಿಸಿ, ಬಿರುಕನ್ನು ಪೋಷಿಸಿ, ದ್ವೇಷ ಬೆಳೆಸಿ, ವಿಚ್ಛೇದನ ಗಳಿಸುತ್ತಿರುವ ಯುವಪೀಳಿಗೆಗೆ ಈ ಕವನದ ಅಂತರಾರ್ಥವು ಸನ್ಮಾರ್ಗದರ್ಶನ ಮಾಡಿಸದೆ ಇರಲಾರದು.. ಉತ್ತಮ ಬರೆಹ..
ReplyDeleteಧನ್ಯವಾದಗಳು ಪ್ರಶಾಂತ್ ನಿಮ್ಮ ಗ್ರಹಿಕೆಗೆ
Deleteಸಮಾಜದ ಈ ಕೊಳಕು ನಮ್ಮ ಇಂದು, ನಾಳೆಗಳ ಮೇಲೆ ಬೀರಬಲ್ಲ ದುಷ್ಪರಿಣಾಮಗಳನ್ನ ನೆನೆದರೆ ಭಯ ಕಾಡದೆ ಬಿಡುವುದಿಲ್ಲ :(