Wednesday, 15 May 2013

ರಾಗಿ ಮುದ್ದೆ ಮಹಿಮೆ

















ಕುದಿ ನೀರು ಹತ್ತು ನಿಮಿಷ ತಂಗಲನ್ನದೊಟ್ಟಿಗೆ
ಹಿಟ್ಟು ಸಿಂಪಡಿಸಿ ಉಕ್ಕಬೇಕು ತಕ್ಕ ಮಟ್ಟಿಗೆ
ಉಕ್ಕೋ ವೇಳೆ ನೀರಿನಷ್ಟು ಸಮಭಾಗದ ಹಿಟ್ಟು ಬೆರೆಸಿ
ಮತ್ತೇ ಬಿಡಬೇಕು ಹತ್ತು ನಿಮಿಷ ಕುದಿವ ಪಾಡಿಗೆ

ಗಂಜಿಗಿಂತ ಚೂರು ಧಟ್ಟ ಇರುವುದು ಮೊದಮೊದಲಿಗೆ
ಹಿಟ್ಟುಗೋಲು ಆಡಿಸಿ ಸುಮಾರು ಹೊತ್ತು ಮೆಲ್ಲಗೆ
ತೀರಾ ಧಟ್ಟವಾದರೆ ಚೂರು ಕುದಿನೀರು ಬೆರೆಸಿ
ತೆಳುವಾದರೆ ಮತ್ತೆ ಬೆರೆಸಿ ಚೂರು ಹಿಟ್ಟು ಘಟ್ಟಿಗೆ

ಬೆಂದ ಹಿಟ್ಟ ಇಳಿಸಿ ಒಲೆಯ ಬೆಂಕಿಯಿಂದ ದೂರಕೆ
ಗಂಟು ಬೀಳದಂತೆ ಕಲೆಸಿ ಹಿಟ್ಟುಗೋಲ ಹಿಂಡಿಗೆ
ಕೊರೆದು ಬಿಲ್ಲೆಯಲ್ಲಿ ಚೆಲ್ಲಿ ತೊಳೆಸು ಕಲ್ಲು ಪೀಟಕೆ
ನಂತರ ಬಿಸಿ ಮುದ್ದೆ ತೊಳೆಸಿ ಚಂಡಿನಂತೆ ಗುಂಡಗೆ

ಬಿಸಿ ಇದ್ದಾಗಲೇ ಇಳಿಸಿ ಊಟದ ತಟ್ಟೆಗೆ
ಬಸ್ಸಾರು ಬಿಸಿ ಅದ್ದಿಗೆ, ಪಲ್ಯ ಜೊತೆಗೆ ನೆಂಜಿಗೆ
ನಾಲಿಗೆಯಿಂದಿಳಿದ ಬಿಸಿ ತುತ್ತು ಅನ್ನನಾಳ ಸೀಳಿ
ಸೇರುವುದು ಕೊನೆಗೆ ಕಾದಿದ್ದ ಹಸಿದ ಹೊಟ್ಟೆಗೆ

ಉಳಿದ ಮುದ್ದೆ ವ್ಯರ್ಥವಲ್ಲ ಚೆಲ್ಲದಿರಿ ಕಲ್ಗಚ್ಚಿಗೆ
ಮೊಸರು ಬೆರೆಸಿ ಚಂದ ಹಿಚುಕಿ ಮಸಾಲೆಯೊಟ್ಟಿಗೆ
ಈರುಳ್ಳಿ, ಮೆಣಸಿನಕಾಯೊಗ್ಗರಣೆ ಬಿದ್ದರೆ
ನಳಪಾಕವಾದರೇನು ಶರಣೆಂಬುದು ಅಂಬಲಿಗೆ

ಬಣ್ಣ ಕಂಡು ಜರಿದ ರೊಟ್ಟಿ ಸಿಕ್ಕವರ ಪಾಲಿಗೆ
ಮರೆತಿರುವರು ಸಂಸ್ಕೃತಿಯ ಇಂದಿನ ಯುವ ಪೀಳಿಗೆ
ರುಚಿಯರಿತು ಆಸ್ವಾದಿಸುವವರ ನಾಲಿಗೆಗೆ ಇದು
ಮೂರುಹೊತ್ತು ಹಬ್ಬದೂಟ, ರುಚಿಬರಿತ ಹೋಳಿಗೆ ........


                                                    --ರತ್ನಸುತ

4 comments:

  1. Tumba chennagide... Mudde tindashte khushi aaytu!

    ReplyDelete
    Replies
    1. ನಿಮ್ಮ ಖುಷಿಯೇ ನಮ್ಮ ಖುಷಿ :)

      Delete
  2. ಇರಪ್ಪ ಈಗ ತಾನೇ ನನ್ನ ಮನೆಯಾಕೆಗೆ ಮುದ್ದೆ ಮಾಡಲು ಹೇಳಿದ್ದೀನಿ.

    ಇದಂತೂ ನನಗೆ ನೆಚ್ಚಿನದಪ್ಪ "ನಳಪಾಕವಾದರೇನು ಶರಣೆಂಬುದು ಅಂಬಲಿಗೆ"

    ಧನ್ಯೋಸ್ಮಿ ಭಾರತ ಮುನಿಗಳೇ ಒಳ್ಳೆಯ ಕವನ.

    ReplyDelete
    Replies
    1. ಪಾಪ ನಿಮ್ಮಾಕಿಗೆ ತ್ರಾಸ್ಕೊಡ್ತು ಅನ್ಸುತ್ತೆ ಈ ನನ್ನ ಕವನ :p
      ಥ್ಯಾಂಕ್ಸ್ ಬದರಿ ಸರ್ ನಿಮ್ಮ ಕಾಮೆಂಟ್ಗಾಗಿ :)

      Delete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...