Tuesday, 14 May 2013

ಧರ್ಮ- ನನಗೆ ತಿಳಿದ ಮಟ್ಟಿಗೆ

ಅತ್ತು ಕರೆಯುವುದು ಕಂದಮ್ಮನ ಧರ್ಮ
ಅಳುವ ಮುನ್ನವೇ ಉಣಿಸುವುದು ತಾಯ ಧರ್ಮ
ಧರ್ಮವನು ಪರಿಪಾಲಿಸಲು  ಇವರೀರ್ವರಿಗೆ
ಕೊಟ್ಟನಾ ಬಂಧನದ ಹೆಸರ ಆ ಬ್ರಹ್ಮ ?!!

ಚಿಗುರುವುದು ಹೂ-ಕಾಯಾಗುವ ಧರ್ಮ
ಉಗಮಿಸುವುದೇ ಕಾಯ ಉದುರಿನ ಧರ್ಮ
ಮಸಣದಲಿ ಮಣ್ಣಾಗುವ ಕೊಳೆತ ದೇಹಗಳು
ತೊಟ್ಟಿಲಿಗೆ ನೀಡಲಿ ಮತ್ತೊಂದು ಜನ್ಮ

ಕರಗುವುದು ಮೋಡಗಳ ಸಹಜ ಧರ್ಮ
ಹನಿಯುವುದ ಅನುಭವಿಸುವುದು ಮಣ್ಣ ಧರ್ಮ
ಕೊಡುವುದನು ಪಡೆದು, ಹಿಂದಿರುಗಿಸುವ ತತ್ವ
ಸಮತೋಲನದ ತಕ್ಕಡಿಯ ಹಿಡಿದ ಪ್ರೇಮ

ಅವರೆನ್ನುವುದು ನನ್ನ ನನ್ನತನದ ಧರ್ಮ
ನಾನೆನ್ನುವುದು ನಾನೇ ಶೃಷ್ಟಿಸಿದ ಧರ್ಮ
ಅವರೊಡನೆ ನಾನು, ಅವರವರೊಡನೆ ಅವರು-
-ನನ್ನೊಡನೆ ಬೆರೆತರೆ ಶಾಂತಿ ಧಾಮ

ಗೀಚುವುದು ಲೇಖನಿಗೆ ಬೆರಳಿನ ಧರ್ಮ
ಹೊರಳುವ ಬೆರಳಿಗೆ ಮನಸಿನ ಧರ್ಮ
ಅಚ್ಚಾಗಿ ಮೂಡಿದ ಪದಮಾಲಿಕೆಗೆ ಇಡಲೇ
ಓದುಗರ ಕಣ್ಮನ ಸೆಳೆಯುವ ನಿಯಮ?

                                       --ರತ್ನಸುತ


1 comment:

  1. ಬದುಕಿನಲ್ಲಿ ಪರಸ್ಪರ ಧರ್ಮ ತತ್ವವನ್ನು ಉಪದೇಶಿಸುವ ಕವನ. ಮೆಚ್ಚುಗೆಯಾಯಿತು.
    'ಕೊಡುವುದನು ಪಡೆದು, ಹಿಂದಿರುಗಿಸುವ ತತ್ವ' ಅತ್ಯುತ್ತಮ ಚಿಂತನೆ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...