ಹೊತ್ತವಳು, ಹೆತ್ತವಳು, ಉಣಿಸಿದವಳಿವಳಲ್ಲಾ
ಬೆಚ್ಚಿದ ಬೆರಳನ್ನು ಈವರೆಗೂ ಹಿಡಿದಾಕೆ
ತಾಯಿಗೂ ಎತ್ತರದ ಸ್ತಾನವೊಂದಿರುವುದಾದರೆ -
- ಈಕೆಗೆ ಮೀಸಲಿಡಬಾರದೇಕೆ ?
ಅಮ್ಮಳಲ್ಲವಾದರೂ "ಅಮ್ಮ" ಎಂದು ಕರೆಸಿಕೊಂಡಾಕೆ
ಇದ್ದ ಚಾಚಿನಷ್ಟು ಗುಡಿಸಲೊಳಗೆ ಜಾಗ ಕೊಟ್ಟು
ಗೂಡಿನ ತುಂಬು ಗುಬ್ಬಿಗಳಲಿ ನಾನು ಮರಿ ಗುಬ್ಬಿ
ಅಳತೆ ಇಡದೆ ಸಲುಹಿದಾಕೆ ಸಮಾನ ಗುಟುಕನಿಟ್ಟು
ಸಹಿಸಿದವಳು ತುಂಟಾಟವ, ತನ್ನವನಾನೆಂದುಕೊಂಡು
ನೋವ ಮೂಲ ಬಲ್ಲವಳು ಜೊತೆಗೆ ತಾ ನೊಂದು
ದೂರಿದವಳಲ್ಲ ನನ್ನ ಕುರಿತು ಯಾರ ಬಳಿಯೂ
ಈಕೆಯ ಸೋಕಿನ ನೆರಳಿದೆ ಪ್ರತಿ ಕಥೆಯಲೊಂದು
ಇನ್ನೂ ಎಳೆದವಳೇ, ಒಂಟಿ ಬುಜಡಿ ಹೊತ್ತ ನೇಗಿಲ
ಅಗಲಿದವರು ಕೊಳೆತ ಮಣ್ಣಿನಲ್ಲಿ ನಲಿಯುತಿರಲು
ಬೇಸರದ ಅಂಚಿಗೆ ಒಂದಿಷ್ಟು ನಗೆಯ ಲೇಪ
ಇರುವ ನಾಲ್ಕು ದಿನದ ಆಟ ಗೆಲುವಿನಲ್ಲಿ ಮುಗಿಸಲು
ಅನುಭವದಕ್ಷತೆಕಾಳಿನ ಆಶಿರ್ವಚನದ ನುಡಿ
ಕಿರಿದಾಗಿಸಿತೆನ್ನ ಬೆಳೆದರೂ ಈಕೆಯ ಮೀರಿ
ಯಾರಲ್ಲಿಯೂ ಬೇಡದ ಸ್ವಾಭಿಮಾನಿ ದೇವತೆ
ಕೊಡುವುದಿವಳ ಹುಟ್ಟು ಗುಣ, ನಾ ಸಾಗುವೆ ಕೋರಿ
ಗರ್ಭಗುಡಿಯ ದೇವಾರಾಧಕ ಧರ್ಮವ ತಿಳಿಸಿದಾಕೆ
ಮೈ ಮನಸನು ಶುಚಿಗೊಳಿಸಿದ ಪವನ ಕಲ್ಯಾಣಿ
ಕರುಳ ಕೂಗು, ಸ್ವಾರ್ತದಾಳ ಇನ್ನೆಷ್ಟೇ ಇರಲಿ
ಜನ್ಮ ನೀಡಿದಾಕೆ ಸಾಕಿದಾಕೆಯ ಅಭಿಮಾನಿ.......
--ರತ್ನಸುತ
ಯಶೋದೆ ಕೃಷ್ಣನ ಬೆಳೆಸಿದರೇನು ಜ್ಞಾಪಕಕ್ಕೆ ಬಂದಿತು.
ReplyDelete"ಇನ್ನೂ ಎಳೆದವಳೇ, ಒಂಟಿ ಬುಜಡಿ ಹೊತ್ತ ನೇಗಿಲ" ಹಲವು ಮನೆಗಳ ನಿಜ ಚಿತ್ರಣ ಕಣ್ಣ ಮುಂದೆ ಬಂದು ನಿಂತಿತು.
ಥ್ಯಾಂಕ್ಸ್ ಬದರಿ ಸರ್ :)
Deleteಬಾಳಿನುದ್ದಕ್ಕೂ ನಮ್ಮಿಂದ ಅಮ್ಮಾ ಎಂದು ಕರೆಸಿಕೊಳ್ಳುವ ಎಲ್ಲಾ ತಾಯಂದಿರಿಗೆ ಮೇಸಲಿದುವೆ ಈ ಕವನವನ್ನ