Friday, 3 May 2013

ಶಾಂತಂ ಪಾಪಂ, ಪೋಲಿ ಕಾವ್ಯಂ

ಪೋಲಿ ಪದ್ಯ ಬರೆಯೋಕಂತ ಹಂಗೋ ಹಿಂಗೋ ಕುಂತೆ
ಕಂಡಿದ್, ಕೇಳಿದ್, ಓದಿದ್ದೆಲ್ಲಾ ತುಂಬಿಸ್ಕೊಂಡು ಮೂಟೆ
ಮನ್ಸಿನ್ ಮೂಲೆ ಗಲ್ಲಿಯಲ್ಲಿ ಪೇಚಾಟದ್ದೇ ಸದ್ದು
ಕೇಳೋದಕ್ಕೂ ಪುರ್ಸೊತ್ತಿಲ್ಲ ನಿಮ್ಸನಾದ್ರೂ ಕಾದು

ದೇವ್ರು-ದಿಂಡ್ರು ಗೆಪ್ತಿಗ್ ಬಂದ್ರು ಕೆನ್ನೆ ಬಾರಿಸ್ಕೊಂಡೆ
ಗುರುಗೋಳ್ ಕಿವಿ ಹಿಂಡ್ದಂಗಾಯ್ತು ಹೆಂಗೋ ತಪ್ಪಿಸ್ಕೊಂಡೆ
ಬಣ್-ಬಣ್ ಮಾತಿನ್ ರಂಗು, ಗುಂಗೆರಿಸ್ತಿತ್ತು ಕಿವಿಯ
ಗೆಪ್ತಿ ಆತು ಎಲ್ಲೋ ಗೆಳೆಯ ಪಿಸ್ಗುಟ್ಟಿದ್ ವಿಸ್ಯ

ತೋಟದ್ ಮನೆ ತಮಟೆ ಏಟು ಬರಿಯೋಕೊಸಿ ಘಾಸಿ
ಗುಂಡು ತೋಪಿನ ಮರಗೋಳ್ ಹಿಂದೆ ಅಡ್ಡಡ್ ಬಂದೆ ಒಸಿ
ನಾಲ್ಗೆ ಕಚ್ಕೊಂಡ್ ಹುಣ್ಣಾಗೋಯ್ತು ಅಷ್ಟರ್ ಮಟ್ಟಿಗ್ ನಾಚ್ಕೆ
ಅಲ್ಗೂ ಅಕ್ಸ್ರ ಮೂಡ್ತಾಯಿತ್ತು ಹಾಳೆ ಮ್ಯಾಲೆ ಬೆಚ್ಗೆ

ಪೋಲಿ ಟೆಂಟು, ಪೋಲಿ ಸಿನ್ಮಾ ಗೆಪ್ತಿ ಬರ್ದೇ ಇದ್ರೆ
ಪೋಲಿ ಪದ್ಯ ಅನ್ಸೋದಾದ್ರೂ ಹೆಂಗೆ ಅಂದ ಮಿತ್ರ
ಕದ್ದು ನೋಡಿದ್ ಸನ್ನಿವೇಶ ಹಂಗೇ ಕಣ್ಮುಂದ್ ಬಂತು
ಏನ್ ಬರ್ಯೋದ್? ಏನ್ ಬಿಡೋದ್? ಎಲ್ಲಾ ಮರ್ತೇ ಹೋಯ್ತು

ಹೆಂಗೋ ಹಂಗೆ ಬರ್ದು ಇಟ್ಟೆ ಸವಾಲ್ ಹಾಕ್ದೋನ್ ಮುಂದೆ
ಅರ್ಧಂಬರ್ಧ ಅರ್ಥ ಮಾಡ್ಕೊಂಡ್ ಸುಮಾರು ಅಂತಂದ
ಏನೋ ಸ್ವಲ್ಪ ತಪ್ಪು ಮಾಡಿ ಕಾಟ್ ಹೊಡ್ದಿದ್ದೆ ಒಂದ್ತುಣ್ಕು
ಅದೇನು ಅಂತ ಹೇಳೋವಷ್ಟರಲ್ ಇದ್ ನನ್ ಪ್ರಾಣ ತಿಂದ

ಲೋಕಕ್ ಹೆದ್ರಿ ಬಚ್ಚಿಟ್ಟೆ ಹರ್ದಾಕೋ ಮನ್ಸಿಲ್ದೀರಾ
ಆಗಾಗ್ ತೆರ್ದು ಓದ್ತಿರ್ತೀನಿ ಮರ್ತಿಲ್ಲ ಅದ್ನ ತೀರಾ
ಬರ್ದಿದ್ ಕರ್ಮ ಅನ್ಕೊಂಡು ಮಡ್ಚಿಟ್ಟೆ ಕಾಣ್ದಂಗೆ
ಪೋಲಿ ಪದ್ಯ ಬರ್ದೊರ್ ಕಥೆ ಇರ್ತೈತೇನೋ ಹಿಂಗೆ?!!......

                                                        
                                                                 --ರತ್ನಸುತ

1 comment:

  1. ಪೋಲೀ ಪಟಾಲಂ ಖುಷ್ ಖುಷಿಯಾಗಿ ಹಾಡ್ಕೋಳ್ಳೋ ಹಂಗೇ ಮಜಬೂತಾಗಿದೆ ಈ ಹಾಡು.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...