Monday, 1 July 2013

ತಳ್ಳು ಬಂಡಿ ಸರಕು






















ಉರುಳಿದ ತಳ್ಳು ಬಂಡಿಯಲ್ಲಿ
ಸೊಪ್ಪು, ಹಣ್ಣು, ತರಕಾರಿ
ಮಾರುವ ಮರ್ಮ ರೀತಿಗಳನು
ಬದಲಿಸಿದ್ದನು ವ್ಯಾಪಾರಿ
ಕೊಳೆತವೆಲ್ಲಾ ಅಡಿಗೆ ಸಿಲುಕಿಸಿ
ಹೊಳೆದವನ್ನೇ ಬಿಂಬಿಸಿ
ಗಿರಾಕಿ ಸಿಕ್ಕರೆ ಕೆ.ಜಿ ತೂಕಕೆ
ಕೊಳೆತವನ್ನೂ ಸೇರಿಸಿ

ಕಟ್ಟು ಸೋಪ್ಪನು ಎರಡು ಮಾಡಿ
"ಒಂದು ಕೊಂಡರೆ ಒಂದು ಉಚಿತ"
ಹಾದು ಹೋದವರನ್ನು ಸೆಳೆಯುವ
ಅವನ ಆಮಿಷದ ಪರಿ
ಕೊಂಡ ಸರಕು ಮಾರಿಕೊಂಡರೆ
ಅಂದೇ ಯುಗಾದಿ, ದೀಪಾವಳಿ
ಯಾರು ಹುಟ್ಟಿದರಾರು ಸತ್ತರೂ
ಅವನಿಗಿಲ್ಲ ಉಸಾಬರಿ!!

ಅವರೆ ತೂಕಕೆ ಒಂದು ರೆಕ್ಕೆ
ಕರಿ ಬೇವಿನ ಎಲೆಯ ಒಡ್ಡು
ದುಬಾರಿ ದನಿಯಾ ಸೊಪ್ಪು
ಕೊಟ್ಟ ಚೆಲ್ಲರೆಗೆ ಹೊಡೆಯಿತು ಸೆಡ್ಡು
ಉಳಿದ ನಾಲ್ಕು ಬಲಿತ ಬೆಂಡೀ
ಇದ್ದ ದರಕೂ ಹೆಚ್ಚು ದುಬಾರಿ
ತೊಂಡೇ, ಬದನೇ, ಈರುಳ್ಳಿ
ಕಣ್ತಪ್ಪಿಸಿ ಬಿತ್ತು ಬುಟ್ಟಿಗೆ ಜಾರಿ

ಹಣ್ಣಲ್ಲದ ಹಣ್ಣು ಗುಡ್ಡೆ
ಏಟು ತಿಂದು ಬಿದ್ದ ಮಾವು
ಒತ್ತಡಕೆ ಹಣ್ಣಾದ ಬಾಳೆ
ದ್ರಾಕ್ಷಿ ಗೊಂಚಲ ಬಿಟ್ಟ ಪೋಲಿ
ಪರಂಗಿ ಮೇಲೆ ನೊಣಗಳ ದಾಳಿ
ಸೇಬಿನೊಂದಿಗೆ ಸೀಬೇ ಹಣ್ಣು
ಹಲಸಿಗೆ ಮೆತ್ತಿತ್ತು ಮಣ್ಣು
ಮುತ್ತಿದವುಗಳಿಗುನ್ಮತ್ತ ಜೇನು

ಮಾರಿಹೊದವು ತಾನೇ ಎಲ್ಲಾ
ಮೂರು ಕಾಸಿನ ಲಾಭ ಇಲ್ಲಾ
ಮಾರು ಸಂತೆಯ ಏರು-ಪೇರಿಗೆ
ತತ್ತರಿಸಿದ ಬಡ ವ್ಯಾಪಾರಿ
ಮುಂದೆ ಹಬ್ಬದ ಕನಸ ಕಂಡು
ಆದ ನಷ್ಟವ ನೆಂಜಿಕೊಂಡು
ಮತ್ತೆ ಸಜ್ಜಾಯಿತು ಬಂಡಿ
ಮಾರಾಟಕೆ ಮರು ತಯಾರಿ......

                         --ರತ್ನಸುತ 

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...