ಅಂಗಲಾಚಿದ ಕೈಗೆ ಎಂಜಲನ್ನವ ಕೊಡುವ
ನಂಜು ತುಂಬಿದ ಮನದ ಮನುಜರಿಲ್ಲಿ
ಬಿಚ್ಚು ಬಾಳಿನ ಮನೆಗೆ ಮಂಜುಗಟ್ಟಿದ ಕಿಟಕಿ
ನೋಟ ಹಾರುತಲಿಲ್ಲಾ ಸ್ವಾರ್ಥ ಬೇಲಿ
ಬತ್ತವಿಲ್ಲದ ಬಳ್ಳ, ಎತ್ತು ಕಟ್ಟಡ ನೇಗಿಲಿದ್ದರೆಲ್ಲಿದೆ
ಅವಕೆ ಸ್ಥಾನ-ಮಾನ
ಮೇಲು ಕೀಳಿನ ಘನತೆ, ಸಮತೆ ಸಾರದ ಹಣತೆ
ಸರಿಪಡಿಸಲಿರಬೇಕೇ ರಾಮ ಬಾಣ ?
ನೆತ್ತರಿಲ್ಲದ ನರವ, ಕೊಡುಗೆ ಇಲ್ಲದ ಕರವ
ಪಿಡಿದು ಕತ್ತರಿಸುವುದು ಪಾಪವಲ್ಲಾ
ಕಿಚ್ಚಿರದ ಎದೆ ಮೇಲೆ ಮಚ್ಚು ಸವರುತ್ತಲಿ
ಹೊತ್ತಿಸಿದ ಕಿಡಿಗಿಚ್ಚು ಬೆಳಕಿಗಲ್ಲಾ
ಕಾಮದಾಹದ ಕೊರಳ ಮಾನವೀಯತೆ ಮರೆತು
ಬಗೆದು ಹಾಕುವ ಬಲದ ನಾರಿ ಎಲ್ಲಿ ?
ತನ್ನ ಬಿಂಬವ ತಾನೇ ಜರಿದ ತಾಯ್ಗನ್ನಡಿ
ಹೆಣ್ಣಾಗಲು ತನ್ನ ಕರುಳ ಬಳ್ಳಿ
ತಿಂದು ತೇಗಿದ ಹೊಟ್ಟೆ, ಗಂಧ ಮೆತ್ತಿದ ಬಟ್ಟೆ
ಎದೆ ಸಾಗರದಲಿ ವಿಷ ಮಂಥನ
ತನ್ನ ತಾನೇ ಗೆಲ್ಲಿಸುತ ಸೊಲುವವರಲ್ಲಿ
ಆತ್ಮಾಭಿಮಾನದ ಸರ್ವ ಪಥನ
ರಾಡಿಯಾದ ಮನಕೆ ರೂಢಿಯಾಗಿದೆ
ಭ್ರಷ್ಟತನವೊಂದೇ ಹಸಿವ ನೀಗಿಸೋ ದವಸ
ಎತ್ತ ಸಾಗಿತೋ ಪಯಣ, ಗುರಿ ಎಲ್ಲಿಹುದೋ
ಸುಳಿವಿರದೆ ಹೆಚ್ಚಿದೆ ಓಟದ ರಭಸ
ಕಣ್ಣು ಕುರುಡಾಗಲಿ, ಮಾತು ಬಿದ್ದೋಗಲಿ
ಹಿತ ವಚನ ಆಲಿಸದ ಕಿವಿಯು ಕಿವುಡಾಗಲಿ
ಮನಸು ಮನಸಲೇ ಮಾತು, ಉಸಿರ ಸ್ಪರ್ಶದ ಪರಿಚಯದಲಿ
"ನಾನು" "ನೀ"ನೆಂಬುದಳಿದು, ಜಗವೇ ಒಂದಾಗಲಿ ......
--ರತ್ನಸುತ
ಬದುಕನ್ನು ಆಳವಾಗಿ ನೋಡುವಾಗ ಕಾಣುವ ವೈರುಧ್ಯಗಳ ಸಾಲು ಸಾಲು ಇಲ್ಲಿ ಕವಿಯ ವಸ್ತು.
ReplyDeleteಕವಿತೆ ಖಂಡಿತ ತಟ್ಟುತ್ತದೆ.