ಬೆಳಕು ಜಾರಿ, ಕತ್ತಲು ತೂರಿ
ಮೇಣ ಕರಗುವ ವೇಳೆಯದು
ಮನೆಯ ಸುತ್ತಲೂ ಸುಣ್ಣದ ಗೋಡೆಯ
ಇದ್ದಲ ಬರಹ ಕಾಣಿಸದು
ಹಬ್ಬವು ಇನ್ನೂ ತಿಂಗಳು ದೂರ
ದೇವರ ನೆನೆಯುವ ಹೊತ್ತಲ್ಲಾ
ಗೂಟಕೆ ಜೋತ ಮಕ್ಕರಿ ಕೆಕ್ಕರಿಸಿ
ನೋಡುತಲಿದೆಯಲ್ಲಾ??
ಅಟ್ಟದ ಮೇಲೆ ಸದ್ದಿನ ಪರಿಚಯ
ಪರಿಚಿತವೆಂಬಂತಿರಲಿಲ್ಲಾ
ಒಬ್ಬನೇ ನಾನು ದೀಪಕೆ ಕಾವಲು
ಆದರೆ ಬೆಳಕು ಬೆದರಿಹುದಲ್ಲಾ ??
ತೊಟ್ಟಿಕ್ಕುವ ತೊಟ್ಟಿಯ ಹನಿಗಳಿಗೆ
ಹೊತ್ತು - ಗೊತ್ತಿನ ಅರಿವೆಲ್ಲಿ
ಏನೂ ಕೆಲಸವ ಒಲ್ಲದ ನನಗೆ
ತೊಟ್ಟುಗಳ ಎಣಿಸುವ ಖೂಲಿ
ನನ್ನ ನೆರಳಿಗೂ ನನ್ನಾಸರೆ
ನಾನಿದ್ದೆಡೆಯೇ ತಾ ಅಂಟಿತ್ತು
ಮಬ್ಬಿನ ಶರ ಮುನ್ನುಗ್ಗಿ ಸೀಳಿತು
ಮಬ್ಬನೇ ಮತ್ತೆ ಮುದ್ದಿಸಿತು
ತಬ್ಬಿಬ್ಬಾದರೆ ತಬ್ಬುವೆನ್ಯಾರ ??
ನಾನೊಬ್ಬನೇ ನನಗಾಗಿರಲು
ಬೆಚ್ಚಿತು ನನ್ನ ಕೆಚ್ಚೆದೆ ಕೊರಳು
ಭಯವೆಂಬುದು ಬಿಗಿದಪ್ಪಿರಲು
ಎಂದೋ ಕೆಡವಿದ ಆಟದ ಗೊಂಬೆ
ಸೇಡಿನ ಹೊರೆ ಹೊತ್ತಿರಬಹುದೇನೋ
ಮುರಿದ ಕೈಯ್ಯಲೇ ಅಸ್ತ್ರವ ಹಿಡಿದು
ಬೆನ್ನ ಹಿಂದೆ ನಿಂತಿದೆ ತಾನು ??
ಕಪ್ಪು ಇರುವೆ ಸೈನ್ಯದ ಮುತ್ತಿಗೆ
ತಪ್ಪಿಸಿಕೊಳ್ಳಲಿ ಎಲ್ಲಿ ??
ಸುತ್ತಲೂ ತಾನೇ ಬೆಳೆದು ಹಬ್ಬಿದೆ
ಸುಟ್ಟು ಕರಕಳಾದ ಬೇಲಿ
ತೆಂಗಿನ ಗರಿ ಮುರಿದು ಬಿತ್ತೊಂದು
ಹಿಂದೆಯೇ ಶಬ್ಧವ ನುಂಗಿದ ಮೌನ
ಯಾರೋ ಹಿಡಿದರು ನನ್ನ ಕೈಯ್ಯ
ನಾನೇ ಅಂದರೂ ನಂಬದ "ನಾ"
ಬಿಟ್ಟ ಕಣ್ಣುಗಳಿಗೆ ಮುಚ್ಚಲು ಭಯ
ಉಸಿರಿನ ಏರಿಳಿತವು ಜೋರು
ಮೆಲ್ಲಗೆ ಬೆಳಕೂ ಮಾಯವಾಯಿತು
ಈಗ "ಕತ್ತಲು" ನನ್ಹೆಸರು.......
--ರತ್ನಸುತ
ಹಳ್ಳಿಗಾಡ ಪರಿಸರ ಕಟ್ಟಿಕೊಡುವುದರಲ್ಲಿ ನಿಮಗೆ ನೀವೇ ಸಾಟಿ. ನನಗೆ ನನ್ನ ವಾಟದಹೊಸಹಳ್ಳಿ ದಿನಗಳು ನೆನಪಾದವು. ಇಂತದೇ ಅಟ್ಟ ಅಲ್ಲೂ ಇತ್ತು.
ReplyDelete