ಕಿಡಿ ಸೋಕಿ ಹಸಿದ ಇದ್ದಲ
ಒಡಲ ಚಡಪಡಿಕೆ
ಮೆಲ್ಲ ಸವರಿದ ತಿಳಿ ಗಾಳಿ
ಬೆಂಬಲ ಅದಕೆ
ಹಸಿವು ನೀಗಿದವೂ ಕೂಡ
ಜೊತೆಯಾದವು ಅಲ್ಲಿ
ತೇಗುತ ಸಿಡಿದು
ಕಿಡಿ ಹನಿಗಳ ಚಿಮ್ಮಿಸಿ
ಕೃಷ್ಣ ಸುಂದರಿ ತನ್ನ
ಇನಿಯನೆದೆಗೆ ಒರಗಿ
ಶೃಂಗಾರವನ್ನಾಲಿಸಿರುವಂತೆ
ಭಾಸ
ಎದೆ ಬಿರಿದು ಕೆಂಪಾಗಿ
ಕಪ್ಪು ಗಲ್ಲಕೆ ಮೆತ್ತಿ
ಸುಂದರಿಯ ನಾಚಿಸಿದಂತಿತ್ತು
ಆ ಸರಸ
ಸಂಜೆ ನಡುಕಕೆ ಹೆದರಿ
ಅಗ್ನಿ ಚಾದರ ಹೊದಿಕೆ
ಶಾಖ ಸ್ಪರ್ಶಕೆ ಉಬ್ಬಿ
ತುಂಡಾದ ರವಿಕೆ
ಬಿರುಕು ಬಿಟ್ಟಲ್ಲೆಲ್ಲಾ
ಜ್ವಾಲೆಯ ಮುತ್ತಿಗೆ
ಆಗ ಸುತ್ತಲೂ ಆವರಿಸಿತು
ಬಿರು ಬೇಸಿಗೆ
ಹಬ್ಬದಬ್ಬರ ಅಲ್ಲಿ
ಒಬ್ಬೊಬ್ಬರಾಗಿ
ಬೆಂದು ಉಗಿದರು ಕೆಂಡ
ಮಂಡಲದ ಒಳಗೆ
ಬಂಢರಲ್ಲಿನ ಬಂಢರೂ
ಅಡಿಗೆ ಸಿಲುಕಿದರು
ಬುಗ್ಗೆಯಾಗಲು ಕಾದು
ಸಣ್ಣ ಕೆದಕುವಿಕೆಗೆ
ತ್ರಾಣವೆಲ್ಲವ ತೀಡಿ
ಪ್ರಾಣವಾಗಿವೆ ಮೇಲೆ
ಭೂದಿ ಪರದೆಯ ಅಡಿಗೆ
ಅವಿತು ಉರಿದು
ಜಲ ಸೋಕಲು
ರಾಗದಲೆ ಮುಕ್ತಿ ಸಿದ್ಧಿ
ವೇಷ ಕಳಚಿ
ಮೂಲ ರೂಪವನು ಪಡೆದು
--ರತ್ನಸುತ
No comments:
Post a Comment