Thursday, 11 July 2013

ತೊಟ್ಟು ಹನಿಗಳು !!!

ಇರದ ಕಾರಣವನ್ನೇ
ಕಾರಣವಾಗಿಸೋ ಕಲೆ
ಕವಿತೆಗೇ ಇರಬೇಕು!!
ಇಲ್ಲವಾದರೆ, ಇದ್ದಕ್ಕಿದ್ದಂತೆ
ಎಲ್ಲಂದರಲ್ಲಿ ಪ್ರತ್ಯಕ್ಷವಾಗುವುದಕೆ
ಏನನ್ನಬೇಕು ?!!

*****
ನಾ ಊರು ಬಿಟ್ಟಾಗಲೆಲ್ಲಾ
ನೀ ಮೇಲೆ ಜೇಬಿಗೆ ಕಾಸು ಇಟ್ಟಾಗ,
ಅಪ್ಪ
"ನೋಟಿನ್ನೂ ಹಸಿಯಾಗಿತ್ತು
ನಿನ್ನ ಕೈ ಮಸಿಯಾಗಿತ್ತು
ಹಣೆ ಬೆವರು ಬಿಸಿಯಾಗಿತ್ತು
ಕಣ್ಣು ಕನಸುಗಳ ಬಸಿರಾಗಿತ್ತು"


*****
ಮುಖದಲ್ಲಿದ್ದರೇನು ಲಕ್ಷಣ ??
ತುಟಿ ಅರಳಲು ಹುಡುಕುತಿದೆ ಕಾರಣ


*****
ಮತ್ತದೇ ಚಂದಿರ
ರೂಪ ಬದಲಿಸಿ ಬಂದಂತೆ,
ನೀನು ನನಗೆ
ಹೊಸ, ಹೊಸ ಪದಮಾಲಿಕೆ
ಕಟ್ಟಿ ಕೊಡಲೇ ನಿನಗೆ?!!


*****
ನಾನಲ್ಲದ ನನ್ನೊಳಗೊಬ್ಬ
ನಿನ್ನ ಹೊಗಳುತ್ತಾ ಬರೀತಾನೆ
ಅವ ಇರೋದು ನನ್ನಲ್ಲೇ
ಅನ್ನೋದನ್ನೂ ಮರಿತಾನೆ
ಕದ ಬಡಿತಾನೆ, ತಲೆ ಕೆರಿತಾನೆ
ಅಡೆ ತಡೆಗಳನ್ನೆಲ್ಲಾ ಮುರಿತಾನೆ
ಕೊನೆಗೆ ನನ್ನ
ನಾನೇ ನಂಬದ ಕವಿ ಮಾಡ್ತಾನೆ
ಯಾರವ್ನು??


*****
"ನೋಡಲ್ಲಿ ಮಿನುಗುವ ನಕ್ಷತ್ರ" ಅಂದಾಗ
ನಿನ್ನ ಕಣ್ಣಲ್ಲಿ ಉದಾಸೀನವಿತ್ತು
ಆಗಷ್ಟೇ ಜಾರಿದ ನಿನ್ನ ಕಂಬನಿ
ನಕ್ಷತ್ರ ಮಿನುಗನ್ನೂ ಮೀರಿಸಿತ್ತು


*****
ಕವಿಯನ್ನ ಕೆಣಕಿದವಳಿಗೆ
ಪಾಪಕ್ಕೆ ಪ್ರಾಯಶ್ಚಿತ
ಕವಿತೆ ಬರೆಯಲು ಕೊಟ್ಟ
ಕಾರಣವೇ ಇರಬೇಕು!!

                  --ರತ್ನಸುತ 

1 comment:

  1. ನಾ ಊರು ಬಿಟ್ಟಾಗಲೆಲ್ಲಾ
    ನೀ ಮೇಲೆ ಜೇಬಿಗೆ ಕಾಸು ಇಟ್ಟಾಗ,
    ಅಪ್ಪ
    "ನೋಟಿನ್ನೂ ಹಸಿಯಾಗಿತ್ತು,
    ನಿನ್ನ ಕೈ ಮಸಿಯಾಗಿತ್ತು,
    ಹಣೆ ಬೆವರು ಬಿಸಿಯಾಗಿತ್ತು,
    ಕಣ್ಣು ಕನಸುಗಳ ಬಸಿರಾಗಿತ್ತು"

    ಯಾಕೋ ತುಂಬಾ ಅತ್ತು ಬಿಟ್ಟೆ ಗೆಳೆಯ, ಚಿಕ್ಕ ವಯಸ್ಸಿನಲ್ಲೇ ನಾನು ಅಪ್ಪನನ್ನೂ ಕಳೆದುಕೊಂಡೆ. ಅವರು ಬದುಕಿದ್ದಾರೆ ಈಹ ಭರ್ತಿ 100 ವರ್ಷ ಅವರಿಗೆ!

    ReplyDelete

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...