Sunday, 7 July 2013

ಕರುನಾಡು

ಕರುನಾಡಿನ ಎದೆಯ ಕರಿಮಣ್ಣಿನ ಜಾಡು
ಮಲೆನಾಡ ಬಿಗಿದಪ್ಪಿದ ಅಚ್ಚ ಹಸಿರ ಕಾಡು
ಜೇನು ಧಾರೆಯ ಮೀರಿಸುವ ಅಕ್ಕರೆಯ ನುಡಿ
ಒಮ್ಮೆಯಾದರು ಕನ್ನಡಿಗನಾಗಿ ನೀ ನೋಡು

ಬಂಗಾರದೆಳೆಯ ಇತಿಹಾಸದ ಮೆರಗು
ಬೆಟ್ಟ ಗುಡ್ಡಗಳ ಸವರಿ ಹರಿದ ಜಲ ಜಿನುಗು
ಅಂತರಾಳದ ತಳದಿ ಬೇರೂರಿದ ಸಂಸ್ಕೃತಿ
ನೆನ್ನೆ, ಇಂದು, ನಾಳೆಗಳಿಗೆ ಭದ್ರತೆಯ ಬೆರಗು

ಉಳಿ ಕೆತ್ತಿನೊಳಗೊಂದು ಶಿಲೆಯಾಗಬಹುದೆಂಬ
ನಂಬಿಕೆಯ ನಿರ್ಮಿತ ಶಿಲ್ಪಿ ಕಲೆ ಬೀಡು
ಜನಪದವೇ ಸಂಗೀತಮಯವಾಗಿದೆ ಇಲ್ಲಿ
ದಾಸ ಜಂಗಮರ ಕಂಠ ಸಿರಿಯ ಹಾಡು

ತೀಡಿದರೆ ಗಂಧ, ಬೇಡಿದರೆ ಬರಹ
ಮೂಡುವುದು ಅಕ್ಷರದ ರೇಷಿಮೆಯ ಸಾಲು
ಕಡಲ ತೀರದ ಅಲೆಯ, ಆಸೆ ಬೀಸಿದ ಬಾಲೆಯ
ನಿರಾಸೆಗೊಳಿಸದ ನೌಕೆಯ ಧನ್ಯತೆಯ ಬಾಳು

ಬಗೆದರೆ ಗರ್ಭ ನಿಧಿ, ಮುಗಿದರೆ ಜೀವ ನದಿ
ಸಮೃಧ ಬೆಳೆ ಬಾಳುವ ಚೇತನದ ನೆಲ
ಯಾರೇ ಬಂದರೂ ಬೇದ ತೋರದ ಮಡಿಲು
ಹೆಜ್ಜೆ ಇಟ್ಟಲ್ಲಿ ಹಾಸುತಲಿ ಹೂವಿನ ದಳ

ವನ್ಯ ಮೃಗ ರಾಶಿ, ಸಸ್ಯ ಸಿರಿ ಕಾಶಿ
ತಾಂತ್ರಿಕ ತೊಟ್ಟಿಲನು ತೂಗಿದ ತಾಯಿ
ಸಾದನೆಯ ಸಾಧನವ ಸಮ ಹಂಚಿದ ಧರಣಿ
ತಿದ್ದುವವರ ಲೇಖನಿಯ ಹೊಕ್ಕ ಶಾಯಿ

ಗಡಿಯಲ್ಲಿ ಗುಡುಗಿದ ಅಪಸ್ವರದ ಗುಡುಗು
ಗಂಡೆದೆಗಳ ಗೆಲ್ಲಲಾಗದೆ ಸೋತವು ಕೊನೆಗೆ
ಸಹೃದಯಶೀಲ ಅಭಿಮಾನವ ಹೆಚ್ಚಿಸಿದೆ
ಅನುಮಾನವೇ ಇಲ್ಲ "ಕನ್ನಡ ಮಣ್ಣೆಡೆಗೆ"

ಕಲ್ಪ ವೃಕ್ಷ ಕನ್ನಡಿಯ ಬಿಂಬದೊಳಗೆ
ಧರ್ಮ ಸಕಲವೂ ಒಂದೇ ಕನ್ನಡತನದಲ್ಲಿ
ಚೆಲುವ ಕನ್ನಡ ನಾಡು ಉದಯವಾಗಲಿ
ಹೃದಯ ಹೃದಯದೊಳಗೆ ಕನ್ನಡದ ನೆತ್ತರರಿಯಲಿ

                                            --ರತ್ನಸುತ 

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...