Tuesday, 9 July 2013

ಅಪ್ಪ ಹೇಳಿದ ಸುಳ್ಳು!!
















ಕಪ್ಪು ಕೋಗಿಲೆ, ಒಪ್ಪಬೇಕು ನೀ
ಅಪ್ಪ ಹೇಳಿದ ಸುಳ್ಳು
ಕಾಗೆ ತೋರಿಸಿ "ನೀನು" ಅಂದನವ ಯಾಕೆ?
ಹೇಳುವೆ ತಾಳು!!

ಅಂಬೆಗಾಲ ನಾ ಇಟ್ಟೆ ಮೊದಲಿಗೆ
ತೆವಲುತಾ ಮನೆಯ ತುಂಬಾ
ಮಗನ ಸಾಧನೆ ಕಂಡು ಅಪ್ಪನಿಗೆ
ಹೇಳಿಕೊಳ್ಳಲು ಜಂಭ

ಹೊಸಲು ದಾಟುವ ಯತ್ನ ಮಾಡಿದೆ
ಅಮ್ಮ ಕುದಿಸಿದಳು ಪಾಯಸ
ಅಪ್ಪ ಊದಿದ ಖುಷಿಯ ಕಹಳೆಯ
ಅವರ ಆ ನಡೆ ಸಮಂಜಸ

ತಮ್ತಮ್ಮ ಸಡಗರದಿ ಮರೆತರು
ನನ್ನ ಒಬ್ಬಂಟಿಯಾಗಿಸಿ
ಹಿಡಿತ ತಪ್ಪಿ ಮೂಗು ಕೊಟ್ಟು
ಬಿದ್ದೆ ನೆಲಕೆ ಮುಗ್ಗರಿಸಿ

ಭೂಮಿಯಾಕಾಶ ಒಂದು ಮಾಡಿತು
ನನ್ನ ನೋವಿನಾಕ್ರಂದನ
ಯತ್ನವೆಲ್ಲವೂ ವಿಫಲವಾಯಿತು
ನೀಡಲೆನಗೆ ಸಾಂತ್ವನ

ಕೇಳಿ ಬಂದಿತು ಮಧುರ ವಾಣಿ
ಹುಣಸೇ ಮರದೊಳಗಿಂದಲೆಲ್ಲೋ
ಮೂಗು ಸೋರುತಲಿದ್ದರೂ ನಾ
ಸುಮ್ಮನಾದೆ, ಮುಂದೆ ಕೇಳು

ಹಠವ ಮಾಡಿದೆ ಅಪ್ಪ ನನ್ನನು
ಆಚೆ ಕರೆದೊಯ್ಯಲಿ ಎಂದು
ಸುತ್ತಲೂ ನೋಡಿದೆ ಕಾಣದೆ ಹೋಯಿತು
ಕೋಗಿಲೆ ಒಂದೂ

ಮತ್ತೆ ಬಿಕ್ಕುವ ಸುಳಿವು ಕೊಟ್ಟೆ
ಅಪ್ಪನಿಗೆ ಏರಿತು ತಲೆ ಬಿಸಿ
ಅಷ್ಟರಲ್ಲೇ ಹಾರಿತೊಂದು ಕಾಗೆ
ಅದೇ ಕೋಗಿಲೆ!! ಅಂದನದನು ತೋರಿಸಿ .......


                                 --ರತ್ನಸುತ 

1 comment:

  1. ಇನ್ನೇನು ಮಾಡುತ್ತಾರೆ ಪಾಪ ಅಪ್ಪ ಅಮ್ಮಂದಿರೂ ಈ ಪಾಪುಗಳು ಕೊಡುತ್ತಾವೆ ಒಮ್ಮೊಮ್ಮೆ ಪ್ರಶ್ನಾಘಾತ!
    ಅಪ್ಪ ನಿಮ್ ಮದುವೆ ಫೋಟೋದಲ್ಲಿ ನಾನ್ಯಾಕಿಲ್ಲಾ? ಅಂತಲೂ ಆಳ್ತವೆ..

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...