Sunday, 27 July 2014

ಮೌನವ ಕೆದಕುತ್ತ

ಕಣ್ಣ ಸಪ್ಪಳವನ್ನೂ ಆಲಿಸುವ ಮೌನ
ಕಣ್ಣೀರ ಸಾಂತ್ವನದ ಸ್ನೇಹಿತ;
ಪಿಸುಗುಡುವ ಮನಸಿಗೆ ಆಪ್ತ,
ಏಕಾಂಗಿ ತಲ್ಲಣಗಳ ಮೋಹಿತ!!

ಮೌನ ಮಾತಾದಾಗ ತಿಳಿ-
ಭೂಕಂಪನಗಳು ಎದೆಯಿಂದೆದೆಗೆ
ರಿಂಗಣಿಸುವಾಗ ನಿಟ್ಟುಸಿರು;
ಎದೆಗೊಟ್ಟವರ ಪಾಲಿಗೇದುಸಿರು!!

ಮುದ್ದು ಮಾತಿಗೊಮ್ಮೊಮ್ಮೆ
ಹದ್ದು ಮೀರುವ ಹಸುಗೂಸು,
ಇನ್ಕೆಲವೊಮ್ಮೆ ಮೀರಿದ ಹಠದಲ್ಲಿ
ಮುನಿವ ಪ್ರಳಯಾಂತಕ!!

ತನ್ನೊಳಗೇ ಲಾವಾ ರಸವ ಅದುಮಿಟ್ಟು 
ಸ್ಪೋಟಿಸದ ಮೌನ ಪರ್ವತ;
ಮನಸೂ ಕೆಲವೊಮ್ಮೆ ಹೀಗೇ
ಮಾತು ತಪ್ಪಿ ಮೌನ ಮುರಿದರೆ
ಅಸಹನೀಯ ನೋವ ಉಣಬಡಿಸುವುದು!!

ನಿರಾಕಾರ ಮೌನವನು ತಡೆವುದೂ,
ಹಿಡಿವುದೂ ಹುಂಬತನ,
ಹೆಜ್ಜೆಗೆಜ್ಜೆಗೊಟ್ಟು ಅನುಸರಿಸಿ ಸಾಗುವುದು
ತಕ್ಕ ಮಟ್ಟಿಗೆ ಜಾಣತನ!!

ಮೌನ ಒಮ್ಮೊಮ್ಮೆ ಪದವಿರದ ಕವನ,
ಮಂತ್ರವಿರದ ಹವನ
ರಾಗವಿರದ ಗಾನ;
ಹೆದ್ದಾರಿಯ ದಾಟ ಹೊರಟು
ಖುದ್ದು ಸಾವಿಗೀಡಾಗುವ ಶ್ವಾನ,
ನಿರಾಧಾರ ನೆನಪುಗಳ ಗರ್ಭವನು
ತುಂಬುವ ಭ್ರೂಣ!!

                               -- ರತ್ನಸುತ

1 comment:

  1. ಮೌನವೆಂಬುದು ಮಾತಿಗಿಂತಲೂ ಎಲ್ಲ ರೀತಿಯಲೂ ಪರಿಣಾಮಕಾರಿ ನಿಜ.

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...