Tuesday, 15 July 2014

ಕ್ರಾಸ್ ಕಲ್ಚರ್

ಮಿಂಚುವುದು ಹಳೆ ಗೋಳು
ಮಾಸುವುದೇ ಹೊಸ ಸ್ಟೈಲು 
ಬಾಚದ ಕೂದಲಿಗೆ ಟ್ರೆಂಡಿ ಹೆಸರು;
ಫೇಸಿನ ಪೌಡರ್ರು
ಕ್ರೀಮು ಕಂಪನಿ ನೂರು
ಸ್ಪ್ರೇಗಳು ತಡೆವವು ದುಡಿಮೆ ಬೆವರು!!

ಟೈಮು ತೋರಿದರಷ್ಟೇ
ಸಾಲದಾಗಿದೆ ವಾಚು
ಬ್ರಾಂಡು ಇಲ್ಲದ ಹೊರತು ಶುದ್ಧ ವೇಷ್ಟು;
ಮನೆಯ ಮುದ್ದೆ ಸಾರು
ವಾಮಿಟ್ಟು ತರಿಸುವುದು
ಪಿಜ್ಜಾ ಬ್ರೆಡ್ಡಿನ ಟೇಸ್ಟು ಬೆಸ್ಟು!!

ಸೈಕಲ್ಲು ತುಳಿವವರ
ಸ್ಟೇಟಸ್ಸು ಕೀಳಂತೆ
ಮನೆಗೆರಡು ಮೋಟಾರು ಬೈಕಿಲ್ಲ ಕಾರು;
ಬಟ್ಟೆ ನೋಡಿ ಅಳತೆ
ಮಾತಿಗೇ ಮಾನ್ಯತೆ
ಹೊಟ್ಟೆ ಪಾಡನು ಕೇಳುವವರು ಯಾರು?!!

ಫಾರಿನ್ನು ಶಾಲೆಗಳು
ಫೇಮಸ್ಸು ಯುನಿವರ್ಸಿಟಿ-
-ಗಳು ದೊಡ್ಡವರ ಸ್ಟಾಂಡರ್ಡು ಕೋಡು;
ದೇಸಿ ಕಲ್ಚರ್ರು 
ಪೂರ್ವಿಕರ ಗೊಡ್ಡಂತೆ
ವೆಸ್ಟ್ರನ್ನು ಅಂದಾಗ "ಅಬ್ಬಾಬ್ಬ ನೋಡು!!"

ರೈಮ್ಸು ಕಲಿತರೆ ಚುರುಕು
ಇಲ್ಲವಾದರೆ ಪೆದ್ದು
ಮಾತೃ ಭಾಷೆಗೆ ಇದುವೇ ಗೋಲ್ಡ್ ಮೆಡಲ್ಲು;
ಮೂವತ್ತು ದಾಟಿದರೆ
ರಿಚ್ಚು ಖಾಯಿಲೆಗಳು
ಕಾಮನ್ನು ಎಲ್ಲೆಲ್ಲೂ ಹಾರ್ಟ್ ಟ್ರಬಲ್ಲು!!

ಮಮ್ಮಿ ಮಕ್ಕಳ ಮಾತು
ಗ್ರ್ಯಾನಿಗಳಿಗೆ ಒಗಟು
ಹಳ್ಳಿಗಳು ಈನಡುವೆ ಲೇಯೌಟ್ಗಳು;
ಕಟ್ಟಿಕೊಂಡವರಲ್ಲಿ
ಏನೋ ಪ್ರಾಬ್ಲಮ್ಮು
ಲೇಟ್ ನೈಟ್ ಪಾರ್ಟಿಯಲಿ ಡ್ಯೂಯೆಟ್ಗಳು!!

                                          -- ರತ್ನಸುತ

1 comment:

  1. ಸಮಾಜದ status ವೈಪರಿತ್ಯಗಳ ಸಮರ್ಥ ನಿರೂಪಣೆ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...