Tuesday, 15 July 2014

ಮನದ ತುಂತುರಿನಲ್ಲಿ

ತುಂತುರು ತವಕಗಳು
ಮನದ ನೆಲವ ಹಸಿಗೊಳಿಸುತ್ತಿವೆ,
ಹೊರಗೂ ನಿಲ್ಲದ ಮಳೆ
ಆಷಾಢ ಮಾಸದ ಶಪಿತ ಮನ;
ಹುಚ್ಚು ಬಯಕೆಗಳ ಸ್ವಚ್ಛ ನಿಲುವು,
ಮೈ ಬಿಸಿ ಸುಡುತಿದೆ ಕಂಬಳಿಯ;
ನವ ನಿರ್ಮಾಣ ಕುಸುರಿ ಕಾರ್ಯಕ್ಕೆ
ಭಾವ ಪೌರರ ಆಗಮನ!!

ಮೋಡಕ್ಕೂ ಅರೆ ಮನಸು,
ಕಂತುಗಳಲ್ಲಿ ಬಂದು ನಿಲ್ಲುತ್ತಿದೆ;
ಬರಬಾರದಿತ್ತೆ ಮಗು ಅತ್ತಂತೆ,
ಯಾರೋ ಹಿಂಬಾಲಿಸಿ ಬಿಟ್ಟಂತೆ?

ಸೂರ್ಯನ ಮುಖ ನೋಡಿ
ಕೆಲ ದಿವಸಗಳೇ ಆಯಿತು;
ಸೊರಗಿ ಹೋಗಿರದಿದ್ದರೆ ಅದೇ ಪುಣ್ಯ;
ಮೈ ಶಾಖದಲ್ಲಿ ಅತಿ ಧನ್ಯ!!

ಕನಸುಗಳು ತೀರ ಹದಗೆಡುತ್ತಿವೆ,
ಹಾಗೂ ಹೆಚ್ಚು ಹಿಡಿಸುತ್ತಿವೆ;
ಸ್ಥಿಮಿತದಲ್ಲಿರದ ಉದ್ರೇಕ
ತಟಸ್ಥನಾಗಲು ಚೆದುರಿದ ಏಕಾಗ್ರತೆ!!

ಬೆರಳುಗಳಿಗೂ ಬೆತ್ತಲ ಭಾವ
ಅಗ್ನಿ ಸ್ಪರ್ಶದಿಂದ ಚೂರು ವಿಮುಕ್ತಿ,
ಸ್ಖಲನಗೊಂಡವು ಸ್ವಮಿಲನದಲ್ಲೇ
ಹಬ್ಬಬಾರದಿತ್ತು ಈ ಹಗಲ ವದಂತಿ;

ಪುಸ್ತಕಗಳಿಗೆ ಮುಖಪುಟದ ಸಾಂತ್ವನ,
ಕಣ್ಣ ನೋಟಕ್ಕೆ ಕಿಟಕಿಯ ದಿಗ್ಬಂಧನ 
ಉಗುರು ಬೆಚ್ಚಗಿನ ಪದ ಗುಚ್ಚಕ್ಕೆ
ಸಮಾಧಾನಕರ ಕಾವ್ಯ ಬಹುಮಾನ!!

                                 -- ರತ್ನಸುತ

1 comment:

  1. "ಮೋಡಕ್ಕೂ ಅರೆ ಮನಸು,
    ಕಂತುಗಳಲ್ಲಿ ಬಂದು ನಿಲ್ಲುತ್ತಿದೆ;
    ಬರಬಾರದಿತ್ತೆ ಮಗು ಅತ್ತಂತೆ,
    ಯಾರೋ ಹಿಂಬಾಲಿಸಿ ಬಿಟ್ಟಂತೆ?"

    ಒಂದು ನೂರು ಬಾರಿಯಾದರೂ ಓದಿಕೊಂಡೆ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...