Tuesday, 15 July 2014

ಗಿರ್ಕಿ

ಎದುರು ಮನೆಯ ಸಾವು
ನೆರೆ ಮನೆಯ ಹಸುಗೂಸ
ಬಿಡುವಿರದ ಅಳಲು;
ಗೌಡರ ಸೊಸೆಯ
ಬಸುರನ್ನ ಬಯಲಿಗೆಳೆದ
ಬಂಜೆ ಕೊರವಂಜಿ!!

ಸಾಲದ ದಿನಸಿಯ
ಬೆಲ್ಲದ ಅಚ್ಚಿಗೆ ಬೆಚ್ಚಗೆ
ಮೆತ್ತಿ ಸತ್ತ ಇರುವೆ;
ಹಾಲು ಗಲ್ಲದ ಮೇಲೆ
ಕೆಂಪು ದೀಪದ ಚುಕ್ಕಿ
ಕೀವುಗಟ್ಟಿದ ಮೊಡವೆ!!

ಕವಳ ಕಾಳಿನ ಚೀಲ
ಕೊರಳ ಜಪ ಮಾಲೆ
ಹಣೆಯ ತ್ರಿಪಟ್ಟಿ;
ಒಡಲಿನ ಬೆವರು
ಮಣ್ಣಿನ ಹಸಿರು
ಅಂಗೈಯ್ಯ ಒರಟು ಕಲೆ!!

ಶಾಲೆ, ಮಂದಿರ-
ಮಸೀದಿಯ ಗಂಟೆ,
ಸ್ಪೀಕರ್ ಗದ್ದಲ;
ರಸ್ತೆ ರಸ್ತೆಗಳ
ಸಿಗ್ನಲ್ ದೀಪಗಳಡಿಯಲಿ
ಹಸಿವ ಕೂಗು!!

ಏಕ ದಿನ ಪ್ರವಾಸಿ ತಾಣ
ನಾಲ್ಕು ಮಂದಿಯ ಕೂಡಿ
ಹಿಂದಿರುಗದ ಮನಸು;
ಬಾಣಂತಿ ಕೋಣೆಯಲಿ
ತೊಟ್ಟಿಲ ಸಿಂಗಾರ
ಕೆನ್ನೀರ ಆರತಿ!!

ಮೌನದ ತೀರ
ಪಿಸುಗುಡುವ ತಂಗಾಳಿ
ಶಂಖ ನಾದ;
ದುಃಖ ಲವಣ
ಖುಷಿಯ ಅಲೆಯು
ಜೀವ ಕಡಲು!!

             -- ರತ್ನಸುತ

1 comment:

  1. ಮನಸಿನ ಗಿರ್ಕಿಗಳು ತುಂಬ ಮಿಡಿತ ಹುಟ್ಟಿಸುವಂತೆ ಬರೆದು ಕೊಟ್ಟಿದ್ದೀರ.

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...