Sunday, 27 July 2014

ರುಜುವಾತು

ಉಸಿರ ಮಾತಿಗೆ ಎದೆಯ ಕದವಿರಿಸಿ
ಯಾರಿಗೂ ಕೇಳಿಸದಂತೆ ವ್ಯವಹರಿಸುವಾಗ
ಬಿಕ್ಕಳಿಕೆ ಮೂಡಿ ಬಯಲಾಗಬಹುದು
ಬೆದರ ಬೇಡ ನಿನ್ನ ದಮ್ಮಯ್ಯ;
ಏನೋ ಕಳೆದಂತೆ ಕಣ್ತುಂಬಿಕೊಳ್ಳುವೆನು
ಇನ್ನೂ ಸನಿಹಕ್ಕೆ ನೆರಳಂತೆ ನಿಲ್ಲುವೆನು
ಕಾಲೆಳೆವ ಕೀಟಲೆ ಸೋಲುಗಳು ಹಲವಾರು
ಬೀಳೋ ಮುನ್ನ ಒಮ್ಮೆ ಬಿಗಿಹಿಡಿಯೆ ಕೈಯ್ಯ!!

ಇರಬಹುದು ನೂರೆಂಟು ಕಾರಣಗಳು 
ನಾವು ದೂರಾಗ ಬಯಸದೇ ದೂರಾದೆವು,
ಹಾಗೆಂದು ಸುಮ್ಮನೆ ಬಿಡಲೊಲ್ಲ ಕನಸುಗಳು
ಇನ್ನೂ ವಿಪರೀತ ಕಾಡಿಸುತಿವೆ;
ಉಪಾಯ ಮಾಡಿ ಹೇಗೋ ಲಾಂದ್ರ ಹಿಡಿದು
ಹೊರಟೆ ರಾತ್ರಿ ಪಾಳಿಗೆ ಕಾಡು-ಮೇಡು ಸುತ್ತಿ,
ಮಿಂಚು ಹುಳುಗಳು ಹೇಗೋ ಪತ್ತೆ ಮಾಡಿ
ನನ್ನ ಬೆನ್ನ್ನು ಬುಡದೆ ಹಿಡಿದು ಛೇಡಿಸುತಿವೆ!!

ಹಾಲು ಬಟ್ಟಲ ತುಂಬ ನಿನ್ನ ಪ್ರತಿಬಿಂಬ
ಬಿಸಿಯನ್ನೂ ಲೆಕ್ಕಿಸದೆ ಒಂದೇ ಗುಟುಕಲ್ಲಿ
ಕುಡಿವಾಸೆಗೆ ಸುಟ್ಟ ನಾಲಗೆಯ ಗುರುತು
ಪ್ರತಿ ಮಾತಿನ ನೆನಪು ನಿನ್ನದೇ ಕುರಿತು;
ನೀ ಎಲ್ಲೋ ನಾ ಎಲ್ಲೋ
ನಿಲುಕದಾಲೋಚನೆಗಳ ತೀರಾ ನಂಬಿದೆವು,
ಹಠವನ್ನು ಬದಿಗೊತ್ತಿ ಸಿಗುವ ಒಮ್ಮೆ
ಮನ ಬಿಚ್ಚಿ ಮಾತನಾಡುವ ಕುಳಿತು!!

ಬಹಳವೇನಲ್ಲ ಸೂಜಿಯಷ್ಟೇ ಗಾಯ
ಹೃದಯವನು ಈ ಮಟ್ಟಕೆ ನೋಯಿಸುತಿದೆ,
ವಿರಹಿಯ ಪರಿತಾಪದಲಿ ಬೆಂದ ಭಾವಗಳು
ಬಿಡುವಿಲ್ಲದೆ ನೋವ ರಿಂಗಣಿಸುತಲಿವೆ;
ಹತ್ತೇ ದಿನಗಳು ಹತ್ತು ದಶಕಗಳಂತೆ
ಮೆಲುಕು ಹಾಕಲು ಮತ್ತೊಂದು ಜನುಮ,
ಮತ್ತೆ ಮತ್ತೆ ನನ್ನ ಎಚ್ಚರಗೊಳಿಸುತಿದೆ
ನಿನ್ನ ಕಣ್ಣ ಹೊಳಪಿಗಿಗೋ ಪ್ರಣಾಮ!!

ಕವಡೆ ದೂರ ಎಸೆದು ಬಂದೆ
ಹಸ್ತ ರೇಖೆ ತಿರುಚಿಕೊಂಡೆ
ಹಣೆಯ ಬರಹಕೊಂದು ಅಳಿಸೋ
ಮಾಯಾ ಅಳಿಕೆ ತಂದೆ;
ಈಡು-ಜೋಡು, ತಿದ್ದಿ-ತೀಡಿ
ಮನ್ವಂತರ ಎದುರು ನೋಡಿ
ನನ್ನ ನಾನೇ ಮರು ರೂಪಿಸಿ
ನಿನ್ನಗೆ ನೀಡೆ ಬರುವೆ, 
ಜೆತೆಗಿರುವ ರುಜುವಾತಿನ ಆಣೆಯನ್ನೂ ಇಡುವೆ!!

                                                  -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...