Tuesday, 15 July 2014

ನಲ್ಮೆಯ ಬದುಕಿಗೆ

ಕ್ಷಮೆಯಿಲ್ಲದ ಸಾಲು ಸಾಲು 
ತಪ್ಪುಗಳ ಮಾಡಿ ಬಂದೆ
ಕೊನೆಯದಾಗಿ ನಿನ್ನ ಪ್ರೀತಿ
ಪಾಲು ಕೇಳಲು;
ಆಸೆ ತುಂಬಿ ಹೃದಯವನ್ನೇ
ಬಗಿದು ಪಾದದಡಿಯಲಿಟ್ಟೆ
ಒಪ್ಪಿಸೋಕೆ ತಂದ ಪ್ರಾಣ
ನಿನ್ನದಾಗಲು!!

ನೆತ್ತರಲ್ಲಿ ಬರೆದ ಓಲೆ 
ಕೊಟ್ಟರಿಲ್ಲ ಯಾವ ಭಾವ
ಉಸಿರ ಕೊಟ್ಟು ಗೀಚಿಕೊಂಡೆ
ಓದ ಬೇಕಿದೆ;
ಸಂತೆ ದಾರಿ ಮಧ್ಯೆ ಒಮ್ಮೆ
ಎಲ್ಲರನ್ನೂ ತಪ್ಪಿಸುತ್ತ
ನಿನ್ನ ತಲುಪೋ ಹಾಗೆ ಮೆಲ್ಲ
ಕೂಗ ಬೇಕಿದೆ!!

ನಿನ್ನ ಮಾತು ಜಾರೋ ಮುನ್ನ
ನನ್ನ ಅರಿವಿನಲ್ಲಿ ಹರಿದು
ಸಿಹಿಯೋ, ಕಹಿಯೋ ಮುಂಚೆ ಎಲ್ಲ
ಅರಿಯ ಬೇಕಿದೆ;
ರೂಪಕೊಂದು ರೂಪಕವ
ಹುಡುಕಿ ಹುಡುಕಿ ಸೋತು ಹೋದೆ
ನಿನಗೆ ನೀನೇ ಸಾಟಿಯೆಂದು
ಬರೆಯ ಬೇಕಿದೆ!!

ಕಣ್ಣ ಅಕ್ಷಯದಲಿ ಒಮ್ಮೆ
ಸುಧೆಯ ಒಳೆಗೆ ಮುಳುಗುವಂತೆ
ನನ್ನ ಬಿಂಬ ಕಾಣುವಾಸೆ
ಎದುರು ಬಂದರೆ;
ಯಾವ ಅಡ್ಡಿ ಇಲ್ಲದಂತೆ
ಸಾಗುತಿಹುದು ಬಾಳ ಪಯಣ
ಎದುರು ಕಾದೆ ಎದುರಿಸೋಕೆ
ಮಧುರ ತೊಂದರೆ!!

ನಲ್ಮೆಯೊಂದೇ ಸಾಕು ನಮಗೆ
ಹೆಮ್ಮೆ ಬಾಳು ಸಾಗಿಸೋಕೆ
ಖಾಲಿ ಕಿಸೆಯ ಕಂಡು ಸಿಡುಕು
ಮೂಡ ಬಾರದು;
ನಿನ್ನ ಪೆಟ್ಟು, ನನ್ನ ಮುದ್ದು
ನಾಲ್ಕು ಗೋಡೆ ನಡುವೆ ಇರಲಿ
ಯಾವ ಕಾರಣಕ್ಕೂ ಆಚೆ
ಇಣುಕ ಬಾರದು!!

                         -- ರತ್ನಸುತ

1 comment:

  1. ಖಾಲಿ ಕಿಸೆ ದಾಸನಾದ ನನಗೆ ಅಮಿತವಾಗಿ ಹಿಡಿಸಿದ ಕವನವಿದು.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...