Tuesday, 15 July 2014

ನಾ ಹುಚ್ಚನಲ್ಲ

ಹೆಜ್ಜೆಜ್ಜೆಯೂ ಭೂಮಿಯ ಕೊನೆಯೆಂದು
ಆತಂಕಗೊಂಡ ಮನಸಿನ ಹಿಂದೆ
ಅದಕ್ಕೂ ಮಿಗಿಲಾಗಿ ಭೀತಿಗೊಳಗಾದ
ನೆರಳಿದೆಯೆಂಬುದು ಅರಿವಿಗೆ ಬರುವ ಮುನ್ನ
ಎಡವಿಕೊಂಡ ಉಂಗುಟದ ಉಗುರು
ಪತ್ತೆ ಹಚ್ಚಲಾರದಷ್ಟು ದೂರ ಹಾರಿತ್ತು;
ತುಳಿದ ನೆರಳಿಗೂ ಅರ್ಥವಾಗಲಿಲ್ಲ
ಬೆರಳ ನೋವು, ತನ್ನ ಪೇಚಾಟದ ನಡುವೆ!!

ಭೂಮಿಗೆ ಕೊನೆಯಿಲ್ಲವೆಂದರಿಯಲು
ಒಂದಿಡಿ ಸುತ್ತು ಸುತ್ತಿ ಬರಬೇಕು;
ಅರ್ಧ ಆಯಸ್ಸು ಕಳೆದು ಅರಿತ ಸತ್ಯವ
ಸಾರ ಹೊರಟರೆ, ನಿರೂಪಿಸು ಎನ್ನುತ್ತಾರೆ;
ನಿರೂಪಿಸಲು ಮತ್ತೊಮ್ಮೆ ಸುತ್ತಬೇಕು
ಅವರೆಲ್ಲರನ್ನೂ ಬೆನ್ನಿಗೆ ಕಟ್ಟಿಕೊಂಡು;
ಸುಮ್ಮನಿದ್ದಿದ್ದರೆ ಸಾಕಾಗಿತ್ತು,
ಇದೀಗ ಮಾರ್ಗ ಮಧ್ಯೆ ಮುಕ್ಕಾಲು ಸತ್ತಿದ್ದೇನೆ!!

ಕುಷ್ಟ ರೋಗಿಯೊಬ್ಬನ ಹೆಣವ
ಹೂಳಲೊಲ್ಲದೆ, ಸುಡಲೊಲ್ಲದೆ
ಭೂಮಿ ಅಂಚಿಗಿ ಕೊಂಡೊಯ್ದು
ದಬ್ಬಲೆಂದು ಹೊರಟಿತ್ತು ಮೆರವಣಿಗೆ;
ಸಿಕ್ಕ ಸಿಕ್ಕವರಿಗೆ ಮತ್ತೆ ಸಿಕ್ಕು
ದಾರಿ ತೋರಿದವರೊಳಗೆ ನಾನೂ ಒಬ್ಬ;
ಮತ್ತೆ ಸಿಕ್ಕರೆ ತಡೆದು ನಿಲ್ಲಿಸಬೇಕು
ಹೆಣವ ಹೊತ್ತವರು ಹೆಣವಾಗುವ ಮುನ್ನ!!

ಧರ್ಮ ಭ್ರಷ್ಟನೆಂದು ಗಲ್ಲಿಗೇರಿಸಿದ
ಅದೆಷ್ಟೋ ತತ್ವಜ್ಞಾನಿಗಳ ಸ್ಮರಿಸುತ್ತ
ಮತ್ತೆ ಮತ್ತೆ ಸಾರುತ್ತೇನೆ
"ಭೂಮಿ ದುಂಡಾಗಿದೆ"
"ಅಸ್ಥಿರ ಸೂರ್ಯನ ಸುತ್ತ 
ತನ್ನ ಕಕ್ಷೆಯಲ್ಲಿ ಪರಿಭ್ರಮಿಸುತ್ತ
ಉರುಳುತ್ತ ಹಗಲಿರುಳು
ಕಣ್ಣಾಮುಚ್ಚಾಲೆ ಆಟವಾಡುತ್ತ!!

ನಾ ಅರಿತ ಸತ್ಯ ತಡವಾಯಿತೇ?!!
ಜಗ ಜಾಹೀರಾದ ಸುದ್ದಿಯ ಹೊತ್ತು
ಭೂಮಿಯ ಸುತ್ತಿ ಸುಸ್ತಾಗಿದ್ದೇನೆ
ಉಂಗುಟದ ಉಗುರ ಹುಡುಕುವ ನೆಪದಲ್ಲಿ;
ಎಲ್ಲರೂ ನನ್ನ ಹುಚ್ಚನೆಂದರೂ
"ಹುಚ್ಚನಿಗೆ ಮಾತ್ರ ಜಗವೇ ಹುಚ್ಚರ ಸಂತೆ,
ತನ್ನೊಬ್ಬನ ಬಿಟ್ಟು;"
ಹೌದು, ನಾ ಹುಚ್ಚನಲ್ಲ!!

ಎಡವಿದ ಜಾಗಕ್ಕೇ 
ಇನ್ನೆಷ್ಟು ಬಾರಿ ಪೆಟ್ಟಾಗುವುದೋ!!
ಸುಮ್ಮನೆ ಒಂದು ಮೂಲೆ ಹಿಡಿದು
ತಟಸ್ಥನಾಗಬೇಕನಿಸುವಾಗಲೇ
ಒಬ್ಬ ಹುರುಳಿಲ್ಲದೆ ವಾದಿಸುತ್ತಾನೆ
"ಭೂಮಿಗೆ ಕೊನೆಯುಂಟು"
ಕಾಲಿಗೆ ಚಕ್ರ ಕಟ್ಟಿಕೊಂಡು
ಮತ್ತೆ ಹುಚ್ಚು ನಡಿಗೆಯಿಟ್ಟೆ!!

                       -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...