Sunday, 27 July 2014

ಗುಡಿ ಪ್ರಸಾದ

ಅವರೆಲ್ಲ ಅವರವರ ಕೆಲಸದಲ್ಲಿ ನಿರತರಾಗಿದ್ದಾಗ
ಅವಳಷ್ಟೇ ನನ್ನ ಕಿತ್ತು ತುನ್ನುವಂತೆ ನೋಡುತ್ತಿದ್ದಳು,
ಹೇಳಿ ಕೇಳಿ ಗುಡಿ ಅರ್ಚಕನ ಮಗಳು;
ದೇವರೇ ಕೊಟ್ಟ ಪ್ರಸಾದವೋ?
ಇಲ್ಲ ಪರೀಕ್ಷೆಯೋ? ತಿಳಿಯಲಿಲ್ಲ, 
ಮನಸು ಮುನ್ನುಗ್ಗು ಅಂದರೆ
ಅನುಭವ ತುಸು ಕಾಯಿಸಿತು!!

ಯಾರೋ ಹೊಡೆದ ಈಡ್ಗಾಯಿ ಚೂರು
ಹಣೆಗೆ ಮುತ್ತಿಟ್ಟು
ಹಣೆ ಬರಹವನ್ನೇ ಬದಲಾಯಿಸಿತು;
ಹೊಚ್ಚ ಹೊಸ ರೇಷಿಮೆ ದಾವಣಿಯ
ತುಂಡು ಮಾಡಿ ಸೀದಾ ಹಾರ್ಟಿಗೇ ಬಿಗಿದಳು;
ಒಳಗಿನ್ನೂ ಗಾಯ ಆರಿಲ್ಲ
ಕಟ್ಟು ಬಿಚ್ಚುಗೊಡುತ್ತಿಲ್ಲ!!

"ಇಷ್ಟಾರ್ಥ ಸಿದ್ಧಿರಸ್ತು" ಎಂದರಸಿ
ಮಂಗಳಾರತಿ ತಟ್ಟೆಯ ಮುಂದಿಟ್ಟ 
ಅವಳಪ್ಪನ ಬಾಯಿಗೆ
ತುಪ್ಪದ ಸಜ್ಜಿಗೆ ತುಂಬಬೇಕು;
ಇಂದು ಅವನ ಚರಣ ಸೋಕಿದೆ,
ಎಂದಾದರೂ ಅವ ನನ್ನ ಕಾಲು ತೊಳೆದು
ಕಣ್ತುಂಬಿದಾನಂದಬಾಷ್ಪದಲಿ
ಜೀವ ದಾನ ಮಾಡುವನೆಂಬ ಆಸೆಯಲ್ಲಿ!!

ದೇವರೂ ಎಷ್ಟೆಂದು ಬೆಂಬಲಿಸಬೇಕು,
ಅವನ ಲಿಸ್ಟಿನಲ್ಲಿ ನನ್ನಂತೆ ಇನ್ನೂ ಕೋಟಿ ಮಂದಿ;
ಗಮನ ಬೇರಾರ ಮೇಲೋ ವಾಲಿಸಿದ,
ನನ್ನ ಪ್ರೀತಿಯ ಪುಷ್ಕರಿಣಿಯಲ್ಲಿ ಮುಳುಗಿಸಿದ;

ಕೆಲಸದ ನಿಮಿತ್ತ ತಿಂಗಳು ಊರು ಬಿಟ್ಟಿದ್ದೆ,
ವಾಪಸ್ಸು ಬರುವಷ್ಟರಲ್ಲಿ ಹಕ್ಕಿ ಇನ್ನಾರದ್ದೋ ತೆಕ್ಕೆಯಲ್ಲಿ;
ಅವಳ ಗಂಡನೀಗ ಅದೇ ಗುಡಿಯ ಪ್ರಧಾನ ಅರ್ಚಕ,
ಮಂಗಳಾರತಿ ತಟ್ಟೆ ಮುಂದಿಟ್ಟು "ಇಷ್ಟಾರ್ಥ ಸಿದ್ಧಿರಸ್ತು!!" ಎಂದರಸಿದ!!

ಹಾರ್ಟಿಗೆ ಬಿಗಿದ ರೇಷಿಮೆ ತುಂಡು
ಚೂರು ಚೂರೇ ಶಿಥಿಲಗೊಂಡು
ಕೊನೆಗೆ ಗಾಯವೂ ವಾಸಿಯಾಯಿತು,
ಹಣೆ ಬರಹಕ್ಕೆ ಹೊಣೆಯಾರೆಂಬಂತೆ!!

ಗುಡಿ ಮೆಟ್ಟಿಲ ಮೇಲೆ ನಿತ್ರಾಣನಾಗಿ ಕುಳಿತೆ,
ಇನ್ನಾವುದೋ ನಗು ನನ್ನ ಕೆಣಕಲಾರಂಭಿಸಿತು;
ನೈಲಾನ್ ದಾವಣಿ ಎಂಬುದೊಂದು ಬಿಟ್ಟರೆ
ಮತ್ತದೇ ನವಿರು ಅನುಭವ, ಮತ್ತೊಂದು ಪ್ರೀತಿ!!

                                                -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...