Tuesday, 15 July 2014

ಚಿಟ್ಟೆ ಆಗುವ ಮುನ್ನ

ನನ್ನ ಸುತ್ತ ಕಟ್ಟಿಕೊಂಡ ಗೂಡಿನ
ಎಳೆ ಎಳೆಯಲ್ಲೂ ನಿನ್ನ ರೇಷಿಮೆ ಗುರುತು;
ಒಳಗೆ ಕತ್ತಲ ಸಾಮ್ರಾಜ್ಯ, ಒಂಟಿ ಯಾತನೆ,
ನಿನ್ನ ನೆನಪೊಂದಿರದಿದ್ದರೆ
ರೆಕ್ಕೆ ತಾಳುವನಕ ಜೀವ ತಾಳದೆ
ಬಿಕ್ಕಿ ಬಿಕ್ಕಿ ಅತ್ತು ಬಿಡುತ್ತಿದ್ದೆ
ಹೃದಯ ಕಿತ್ತೆಸೆದು
ವಿಲ-ವಿಲ ಒದ್ದಾಡಿ ಸತ್ತು ಬಿಡುತ್ತಿದ್ದೆ;

ಕಾಣದ ಕಣ್ಣಿನೊಳಗೆ ಬಣ್ಣ ಬಣ್ಣದ
ಕನಸುಗಳು ಮೂಡುವಂತಾಗಿದ್ದು
ನಿನ್ನ ನಿರೀಕ್ಷೆಯ ಭಾರ ಹೊತ್ತು;
ನೀ ಸವರಿ ಬಿಟ್ಟ ಎದೆಯ ಮೇಲೆ
ಚಿಗುರಿದ ರೋಮ ರೋಮವೂ
ಹೊಸ ಕಥೆಗಳ ಪಾಡುವಲ್ಲಿ
ನೀನೇ ಕಥಾ ನಯಕಿ;
ನನಗಲ್ಲಿ ಪೋಷಕ ಪಾತ್ರವಷ್ಟೇ!!

ಅಲ್ಪ ಮೊತ್ತದ ಆನಂದವ ಅರಗಿಸಿಕೊಳ್ಳಲಾಗದವ
ಜೀವಮಾನದ ಸುರಿಯ ಒಡೆಯನೆಂದು
ಊಹೆಗೈವುದೂ ಅತಿಶಯ;
ಮೋಹ ತೆಕ್ಕೆ ಸಣ್ಣದು,
ಪ್ರವಾಹ ಭೀತಿಯ ಸಹಿಸದು;
ಇನ್ನೂ ಅಲೆ ಅಪ್ಪಳಿಸದ 
ಕಿನಾರೆಯ ಮರಳ ದಂಡೆಯ ಪಾಡು ನನದು!!

ರೆಕ್ಕೆಯ ಬಲಾಬಲದ ಪ್ರಯೋಗಕ್ಕೆ
ನಿನ್ನ ಪ್ರೇಮಾಯಣದ ಪ್ರೇರಣೆ;
ಇದ್ದಲ್ಲಿಯ ಆವರಣಕ್ಕೆ ಸಾವಿರ ಪಟ್ಟು ಜೋಡಿಸಿ
ದಿಗ್ಬ್ರಾಂತನಾಗುತ್ತೇನೆ;
ಒಂದೇ ಏಟಿಗೆ ನಿನ್ನ ಹೊತ್ತು
ಲೋಕ ಸಂಚಾರ ನಡೆಸುವ ಹುಂಬ-
ನಾನೆಂದರೆ ನಗದಿರು;
ಆ ನಗುವಲ್ಲೇ ಇದ್ದ ಪ್ರಾಣ ಹಾರಬಹುದು!!

ಇನ್ನೇನು ಗೂಡಿಗೂ ಸಂಬಾಳಿಸಲಾಗದೆ
ಬಿಟ್ಟುಗೊಡುವ ತಯಾರಿಯಲ್ಲಿದೆ;
ಎಂದೂ ಕಾಣದ ಬೆಳಕು
ಕಣ್ಣ ಚುಚ್ಚಬಹುದು,
ಲೋಕದ ವಿಶಾಲತೆಗೆ ಹೃದಯ
ಬೆಚ್ಚಿ ಬೀಳಬಹುದು;
ನಿನ್ನ ಪ್ರೇಮ ರಕ್ಷೆಯೊಂದೇ
ಆಧಾರಕ್ಕೂ ಆಧರ!!

ಇಗೋ ಹಾರ ಹೊರಟೆ 
ಹುಡುಕಾಟಕ್ಕೆ ಕೊನೆಯಿಲ್ಲವೆಂಬಂತೆ
ಅಲೆಮಾರಿ ಅರಸನಾಗಿ!!

                                -- ರತ್ನಸುತ

1 comment:

  1. ಮೊದಲ ಬಾರಿಗೆ ಬೆಂಗಳೂರಿಗೆ ಬಂದಾಗ ನನ್ನ ಮನಸು ಚೀರಿ ಹೇಳಿದ್ದು,
    ’ಲೋಕದ ವಿಶಾಲತೆಗೆ ಹೃದಯ
    ಬೆಚ್ಚಿ ಬೀಳಬಹುದು;’

    ಉತ್ತಮ ಕವನ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...