Sunday, 27 July 2014

ಕನಸ ದಾಟಿ ಬರುವೆ ತಾಳಿ

ಕನಸು ಬೀಳುವ ಮುನ್ನ
ಕಣ್ಣುಗಳ ಕಿತ್ತಿಟ್ಟು
ವಿಳಾಸವ ಎತ್ತಿಟ್ಟು
ಹೆಸರನ್ನೂ ಮುಚ್ಚಿಟ್ಟು
ನಾನಲ್ಲದವನಾಗಿ ಸಾಗಿ ಬರುವೆ;
ಮತ್ತೆ ದೃಷ್ಟಿ ಬರಲಿ
ಊರ ಪತ್ತೆ ಸಿಗಲಿ
ಹೆಸರು ಉಳಿದೇ ಇರಲಿ!!

ಕಣ್ಣಿಲ್ಲದವನ ಕನಿಕರಿಸಿ
ಕೈ ಹಿಡಿದು ನಡೆಸಿದವರ
ಹೆಜ್ಜೆ ಸದ್ದನು ಮೂಸ ಬಲ್ಲೆ;
ನಿಂದಿಸಿ ನಕ್ಕವರ,
ಜಾಡಿಸಿ ಜರಿದವರ
ನಾಡಿ ಮಿಡಿತದಲ್ಲೇ ಮತ್ತೆ
ಗುರುತು ಹಚ್ಚಬಲ್ಲೆ!!

ಊರು ಸೂರಿಲ್ಲದವನ
ಹೊತ್ತು ತುತ್ತಿಗಾಧಾರವಾದವರು
ಕಾಳು ಕಾಳು ಕೂಡಿಟ್ಟ
ಇರುವೆಯ ಮನಸುಳ್ಳವರು;
ಹಾದು ಹೊರಟ ಬೀದಿ ತೂಂಬ
ಹೆಗ್ಗಣಗಳ ಕಳ್ಳ ಮೂಸೆ,
ಬಲ್ಲವರೇ ಬಲ್ಲರು
ಅನ್ನ ಚೆಲ್ಲಿದವರಲ್ಲ, ಹಸಿವಿನ ನೋವ!!

ಬೆನ್ನಿಗೊಂದು ಹೆಸರಿಟ್ಟು
ವ್ಯಂಗ್ಯವಾಡುವವರಿಗೆಲ್ಲ
ನಾನೊಬ್ಬ ಅನಾಮಿಕ;
ಎದೆಗೆದೆಯ ಮುಂದಿಟ್ಟು
ಕಣ್ಣಲಿ ಕಣ್ಣಿಟ್ಟು 
ಇಡದ ಹೆಸರಿಗೂ ಸಿಗುವಾತ;
ನಾ ನಿಮ್ಮವನೆಂಬುವ ಹೆಸರೇ
ಅವ್ವ ಇಟ್ಟುದಕ್ಕೂ ಸೂಕ್ತ!!

ಕನಸ ದಾಟಿ ಬಂದವನ
ಕುಶಲ ಕೇಳಿ ಬಂದವರು
ಎಡ-ಬಲ ಪಂಕ್ತಿಯಲ್ಲುಂಡವರು;
ನಟ್ಟ ನಡು ಉಸಿರಿಗೀಗ ದೈವ ಸಿದ್ಧಿ,
ಸ್ಪುಟದ ಹಾಳೆ ತಿದ್ದಿ ಬುದ್ಧಿ,
ನಿದ್ದೆಯಿಂದೆದ್ದ ಚಿತ್ತ ಎಂದಿಗಿಂತ ಹಗುರ
ಅಲ್ಲಿ ತೂಕದ ವಿಚಾರ!!

                                   -- ರತ್ನಸುತ

1 comment:

  1. ಮನುಜರ ಎಲ್ಲ ಮುಖಗಳನ್ನು ಅನಾವರಣ ಮಾಡಿಬಿಟ್ಟಿದ್ದೀರ.

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...