Tuesday, 15 July 2014

ನಾನಲ್ಲ್ಲದ ನಾನು

ವಾಚಾಳಿ ಸಾಲುಗಳು
ನನ್ನವಾಗಿರಬಹುದು
ನಾನೇನು ಪ್ರಖ್ಯಾತ ಕವಿಯಲ್ಲ;
ಬರಿ ಬೊಗಳುವ ದಾಸ 
ನಾನಾಗಿರಬಹುದು
ಆದರೆ ದಿಕ್ಕೆಟ್ಟ ಪಾಡಲ್ಲ!!

ನನಗಂತ ಯಾವೊಂದೂ
ಸ್ವಂತಿಕೆ ಇರದಿರಲು
ನಾನಿದ್ದೂ ಇಲ್ಲವಾದವನಲ್ಲ;
ನನ್ನ ಹೆಸರು ಎಲ್ಲೂ
ಪ್ರಚಲಿತವಾಗಿಲ್ಲ
ಹಾಗಂತ ಆಗಂತುಕ ಅಲ್ಲ!!

ಉಪ್ಪರಿಗೆ ಮೇಲಿಂದ
ಪರಪಂಚ ಕಂಡವನು
ಎವರಸ್ಟಿಗಾಸೆ ಪಟ್ಟವನಲ್ಲ;
ಇದ್ದಂತೆಯೇ ಖುಷಿ
ಹೊಂದಿದವ ನಾನೆಂದೂ
ದಿ ಬೆಸ್ಟು ಆಗುವ ಮನಸಿಲ್ಲ!!

ಮನೆ ಮಟ್ಟಿಗೆ ಚೂರು
ಒಳ್ಳೆ ಹುಡುಗ ನಾನು
ಹೆಸರಿಟ್ಟು ಆಡಿಕೊಂಡವರಿಲ್ಲ;
ಈ ಬೀದಿಯ ಬದಿಗೆ
ನನ್ನಂಥವನೊಬ್ಬ
ಇರುವಂಥ ಮಾಹಿತಿ ದೊರೆತಿಲ್ಲ!!

ಚಟವುಂಟು ನೂರೆಂಟು
ಹಠ ಗೆಲ್ಲಿಸುವ ಗುಟ್ಟು
ಬಿಟ್ಟುಗೊಡುವ ವಿದ್ಯೆ ಕಲಿತಿಲ್ಲ;
ಎಳೆಸಾದ ತಲೆಯೊಳಗೆ
ಸೊಗಸಾದ ಕನಸುಗಳು
ಈಡೇರಿಸೋ ಶಕ್ತಿ ನನಗಿಲ್ಲ!!

ನಾನಲ್ಲ ಹಿತವನು
ಅಹಿತಕರನೂ ಅಲ್ಲ
ಸ್ವಾವಲಂಬನೆ ಬಿಟ್ಟು ಬೇರಿಲ್ಲ;
ಇರದುದ್ದಕೆ ಅತ್ತು
ಇದ್ದುದ್ದಕೆ ಬೀಗಿ
ಸಮತೋಲನವ ಎಂದೂ ತಪ್ಪಿಲ್ಲ!!

ನನ್ನವರು ನೂರಾರು
ಅದರಾಚೆ ಇನ್ನೂರು
ಮತ್ತಾರು ಇದ್ದಾರೋ ಗೊತ್ತಿಲ್ಲ;
ಹೀಗೇ ಇರಬೇಕು
ಅಂದುಕೊಂಡವರಾರೂ
ಈ ತನಕ ಬಾಳಲ್ಲಿ ಸಿಕ್ಕಿಲ್ಲ!!

                        -- ರತ್ನಸುತ

1 comment:

  1. ಹೌದಲ್ಲವೇ ಹೀಗೇ ಇರಬೇಕು ಎಂದುಕೊಂಡವರು ಸಿಗರು ನಮಗೆ ಸಲೀಸಾಗಿ.

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...