ಮೊಬೈಲ್ ತಣ್ಣಗಾಯಿತು
ಏನಾಯಿತೋ ಗೊತ್ತಿಲ್ಲ
ಇದ್ದಕ್ಕಿದ್ದಂತೆ ಅಸು ನೀಗಿತು
ಹಿಂದೆಲ್ಲ ೩ಜಿ ಬಳಸಿದಾಗಲೋ
ದೀರ್ಘ ಕಾಲ ವೀಡಿಯೋ ನೋಡುವಾಗಲೋ
ಕೆಂಡವಾಗುತ್ತಿದ್ದ ಮೊಬೈಲನ್ನ
ಎಷ್ಟು ಶಪಿಸುತ್ತಿದ್ದೆನೋ
ಅಷ್ಟೇ ವಿಚಲಿತನಾಗಿ ನೊಂದುಕೊಳ್ಳುತ್ತಿದ್ದೇನೆ
ಕೃಷ್ಣ ಸುಂದರಿಯಂತೆ ಕಂಗೊಳಿಸುತ್ತಿದ್ದ ತಾನು
ಸದಾ ಮನಸಿಗೆ ಹತ್ತಿರವಾಗಿತ್ತು,
ಕಣ್ಣೀರ ಬಿಂಬಿಸುತ ಮಡಿಲಾಗಿ
ಖುಷಿಯಲ್ಲಿ ಮತ್ತಷ್ಟು ಮಿಗಿಲಾಗಿ
ಬಾಳ ಸಂಗಾತಿಯಾಗಿ ಉಳಿದಿತ್ತು
ಪಾಪದ ಮೊಬೈಲು!!
ನಡು ರಾತ್ರಿಯಲ್ಲೂ ಅಲರ್ಟ್ಗಳನ್ನ
ತಪ್ಪಿಸದೆ ಒಪ್ಪಿಸುತ್ತಿದ್ದ ಗೆಳತಿ;
ನನಗೆ ಮದುವೆಯಾಗಿದ್ದಿದ್ದರೆ
ತಾನೇ ನನ್ನ ಸವತಿ!!
ಬಿದ್ದಿತ್ತು ಬಹಳಷ್ಟು ಜನರ ಕಣ್ಣು
ತನ್ನ ತೆಳು ವಿನ್ಯಾಸದ ಮೇಲೆ;
ಕೇಳುವವರೇ ಎಲ್ಲ ಉತ್ಸುಕರಾಗಿ
ಉದ್ದ, ಅಗಲ, ಸೂಕ್ಷ್ಮ ಅಂತರಂಗದ ಮಾಹಿತಿಯ
ಕೈಯ್ಯಿಂದ ಹೊರಳಿ ಹೊರಳಿ ನೋಡುತ!!
ಉಸಿರಿಲ್ಲದ ಶವದಂತಾದ ತಾನು
ತನ್ನಲ್ಲಿ ಉಳಿಸಿಕೊಂಡ ನನ್ನ ಎಷ್ಟೋ ನೆನಪುಗಳ
ಒಮ್ಮೆಯಾದರೂ ತೆರೆದಿಡಬೇಕಿತ್ತು
ಕೊನೆಗೊಮ್ಮೆ ಮನಸಾರೆ ಆಸ್ವಾದಸಲು;
ಕಾಲ ನಿಜಕ್ಕೂ ಕ್ರೂರಿ!!
ತಾನು ಚಾಲ್ತಿಯಾಗುವಾಗ ಮೂಡುವ
ಇಂಪಾದ ನಿನಾದ
ಇನ್ನೂ ಕಿವಿಯಲ್ಲಿ ಗುನುಗುತ್ತಿದೆ;
ಇನ್ನಿಲ್ಲವಾದುದ ಮರೆಯುವ ಯತ್ನದಲಿ
ಕಣ್ಣೀರು ಜಿನುಗುತ್ತಿದೆ!!
--ರತ್ನಸುತ
No comments:
Post a Comment