Monday, 29 December 2014

Comeಬನಿ ಸಾಲು

ಕಣ್ಣ ಹನಿಯೊಂದು ಕೀಟಲೆ ಮಾಡುತ್ತ
ಜಾರಿದ್ದಾದಮೇಲೆ ಅಲ್ಲೊಂದು ಸಣ್ಣ ತುರಿಕೆ;
ಒರೆಸಿಕೊಂಡರೆ ಸಾಲದು

ಉಗುರು ಸೋಕಿಸಿ ಒಂದೆರಡು ಬಾರಿ ಕೆರೆಯಬೇಕು!!

ಚಳಿಗಾಲದ ಒಡೆದ ಒರಟುಗೆನ್ನೆಯ ಮೇಲೆ
ಮೂಡಿದ ಗೆರೆಗಳು
ಬತ್ತಿದ ನಾಲೆಯ ನಡುವೆ
ಸಣ್ಣ ಕಾಲುವೆ ಕೊರೆದಂತಿದ್ದವು

ಕಣ್ಣಿಗೆ ತಣ್ಣೀರೆರಚಿಕೊಂಡರೂ
ಕಂಬನಿಯ ಕಲೆ ಮಾತ್ರ ಹಾಗೇ ಉಳಿದಿತ್ತು
ಬಹುಶಃ ಯಾರದ್ದೋ ಸಾಂತ್ವನಕ್ಕೆ
ಸುದೀರ್ಘವಾಗಿ ಕಾದಿರಬೇಕು

ನಾ ಅಷ್ಟೇನು ಅಪಕ್ವ ನಟನಲ್ಲ
ಆದರೂ ನಗುವಿನ ನಟನೆ
ಕೃತಕವಾಗಿ ಬಹಳ ಹೀನವಾಗಿ ಕಾಣುತ್ತಿತ್ತು
ನನ್ನನ್ನೇ ತೃಪ್ತಿ ಪಡಿಸದ ನಗು ಇನ್ನಾರ ಹಿತಕ್ಕಾಗಿ?
ನಗುವುದನ್ನೇ ಬಿಟ್ಟುಬಿಟ್ಟೆ!!


ಕಣ್ಣೆವೆಗೆ ಅಂಟಿ ಬಡಿತಕ್ಕಷ್ಟೇ ಕದ            
ಕೊನೆಯ ಹನಿಯಲ್ಲಿ
ದುಃಖದ ಒಟ್ಟಾರೆ ಸಾರಾಂಶ ಅಡಗಿತ್ತು,
ಬತ್ತಿದ ನಾಲೆ ಮತ್ತೆ ತುಂಬಿತು

ಕೊರೆದ ಕಾಲುವೆಗಳೂ ಸಹಿತ!!

-- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...