Monday, 29 December 2014

ಒಂದು ಸಣ್ಣ ಕೂಗು

ಜಗದ ಎಲ್ಲ ಜೀವಗಳಿಗೂ ನೆರಳು ನೀನಂತೆ
ಆಡುತಿರುವ ಉಸಿರು ಕೂಡ ನಿನ್ನದೇನಂತೆ
ಪ್ರಭುವೇ ನೀ ಎಲ್ಲಿರುವೆ?...

ನಿನ್ನ ಕಾಣ ಬಯಸಿರುವೆ!!


ಹಸಿವ ಕೂಡ ಮರೆಸುವಂಥ ಕೈಯ್ಯಿ ನಿನದಂತೆ
ನೆನೆದರಲ್ಲೇ ಉಳಿಯದಂತೆ ಯಾವುದೇ ಚಿಂತೆ
ಪ್ರಭುವೇ ನೀ ಎಲ್ಲಿರುವೆ?
ನಿನ್ನ ಕಾಣ ಬಯಸಿರುವೆ!!


ಮುಳುಗಿ ಏಳುವೆ ನಿನ್ನ ಧ್ಯಾನದಿ
ಮೊಣಕಾಲೂರಿ ನಾ ಬೇಡುವೆ
ತಲೆಯ ಬಾಗಿಸಿ ನೆಲವ ತಾಕುವೆ
ಹೆಸರೇ ಇಲ್ಲದೆ ಕೂಗುವೆ
ಹೆಸರೇ ಇಲ್ಲದೆ ಕೂಗುವೆ....


ಯಾವ ದಿಕ್ಕು, ಯಾವ ದಾರಿ ಹೇಳು ನೀ ಬೇಗ?
ನಿನ್ನ ಮಡಿಲ ಸೇರಬೇಕು ನೋಡು ನಾನೀಗ
ಪ್ರಭುವೇ ನೀ ಎಲ್ಲಿರುವೆ?
ನಿನ್ನ ಕಾಣ ಬಯಸಿರುವೆ!!


ಹರಿವ ಕಣ್ಣಿಗೆ ನಿನದೇ ಹಂಬಲ
ಎದೆ ಬಡಿತಕ್ಕೂ ನೀನೇ ದೊರೆ
ಕರೆವ ಈ ಸ್ವರ ಚೂರು ಸಣ್ಣದು
ಅತಿ ಆತ್ಮೀಯವೇ ಆದರೆ
ಅತಿ ಆತ್ಮೀಯವೇ ಆದರೆ...


ಎಲ್ಲ ನೀನೇ ಅನ್ನುವಾಗ ಎಲ್ಲಿ ನೀ ಹೋದೆ
ಬೇಗ ಬಂದು ನೀಗಿಸಯ್ಯ ಮನಸಿನ ಬಾಧೆ
ಪ್ರಭುವೇ ನೀ ಎಲ್ಲಿರುವೆ?
ನಿನ್ನ ಕಾಣ ಬಯಸಿರುವೆ!!


-- ರತ್ನಸುತ

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...