ನನ್ನ ಕನ್ನಡಕ ಕಂಡು
ಬಿಕ್ಕಿದ ಹಸುಳೆಗಳಿಗೆ
ನಾನೊಬ್ಬ ಭೂತದಂತೆ ಕಂಡಿರಬೇಕು,
ಪಾಪ ಹೊಸ ಕನ್ನಡಿ ಮಾತ್ರ
ನನ್ನ ಎಂದಿನಂತೆ ಬಿಂಬಿಸುತ್ತಿದೆ
ಅದರ ತ್ಯಾಗವನ್ನ
ನಾ ಸಾಯುವ ತನಕ ಸ್ಮರಿಸಲೇ ಬೇಕು!!
ನಾ ನಡೆದ ದಾರಿಯಲ್ಲಿ
ಗರಿಕೆ ಪಕ್ಕಕ್ಕೆ ಸರಿದು
ದಾರಿ ಮಾಡಿಕೊಟ್ಟಿತೆಂಬ
ಭ್ರಮೆಯೇ ಸಾಕು
ನನ್ನ ಹುಂಬತನವನ್ನ ನಿರೂಪಿಸಲು;
ನಡು ರಾತ್ರಿಯಲಿ ಕೊಡೆ ಹಿಡಿದೆ
ಬೆಳದಿಂಗಳು ಬೆಚ್ಚಿತು
ತಾರೆಗಳು ಮುನಿಸಿಕೊಂಡವು
ಬಿಸಿಲು ಮರೆಯಲ್ಲೇ
ನಕ್ಕು-ನಕ್ಕು ಸತ್ತು ಹೋಯಿತು
ಕನಸುಗಳು ಜೇಬಿಗಿಳಿದು
ಎಲ್ಲವನ್ನೂ ಆಸ್ವಾದಿಸುತ್ತಿದ್ದವು
ನಾ ಅವುಗಳ ಕಾವಲಿಗೆ ನಿಂತಿದ್ದೆ!!
ಅಂಗೈಯ್ಯ ರೇಖೆಗಳನ್ನ
ಎಣಿಸುವುದೇ ಒಮ್ಮೊಮ್ಮೆ ಕಸುಬು
"ಹಣೆ ಬರಹ"ವ ನೋಡಿಕೊಳ್ಳಲು ಹೋಗಿ
ಹಿತ್ತಲ ತೊಟ್ಟಿಯಲ್ಲಿ
ಅದೆಷ್ಟು ಬಾರಿ ತಲೆ ಅದ್ದಿಹೆನೋ;
ಪುಣ್ಯಕ್ಕೆ ಉಸಿರಾಟ ಖಾತರಿಯಾಗುತ್ತಿತ್ತು
ಪುಸ್ತಕ ಹಿಡಿದೆನೆಂದರೆ
ಇದ್ದ ಪುಟವ ಬಿಟ್ಟು
ಮುಂದಿನ ಪುಟದ ಕೌತುಕದಲ್ಲಿ
ಒಂದೇ ಏಟಿಗೆ ಕೊನೆ ಪುಟಕ್ಕೆ ಹೊರಳಿ
ಓದು ಮುಗಿಸಿದ ಸಮಾದಾನಕ್ಕೆ
ಬಿದ್ದುದ್ದು ಅದೆಷ್ಟೊ ಬಾರಿ;
ಜೀವನ ಅಂತೆ ಇಲ್ಲವೆಂಬುದೇ ಬೇಸರ!!
ಕೋಳಿಗೆ ಜ್ವರ ಬಂತೆಂದರೆ
ಉಪವಾಸ ಸಾಯುತ್ತೇನೆ
ನನಗೇ ಬಂದಾಗ
ಕೋಳಿಯನ್ನೇ ಗುಳುಂ ಮಾಡಿ
ನಂತರ ಏಕಾಂಗಿಯಾಗುತ್ತೇನೆ
ನನ್ನಂಥ ನನಗೇ
ನಾನಿನ್ನೂ ನಿಗೂಢ
ಇನ್ನು ನಿಮಗೆ ವಿವರಿಸುವುದು
ಬೇಡ!!
-- ರತ್ನಸುತ
No comments:
Post a Comment