ಮೆಚ್ಚಿ ನೀಡಿದ ಹೃದಯದೊಳಗೆ
ನೆತ್ತರು ಇಂಗಿ ಟೊಳ್ಳಾಗಿದೆ
ಒಮ್ಮೆ ಹಿಂದಿರುಗಿಸು
ಭರ್ತಿ ಮಾಡಿ ಕೊಡುವೆ
ಪ್ರೀತಿಯಲ್ಲಿ ಯಾವ ಕೊರತೆಗಳೂ ಬೇಡ
ಹಳೆ ಆಣೆ ಭಾಷೆಗಳಿಟ್ಟ
ಹಸ್ತ ಸವೆದು ಮಾಸಿಹೋಗಿದೆ
ನಾಲ್ಕೂ ಕೈಗಳು ನೆಟ್ಟ ಬಳ್ಳಿ
ಹೂ ಬಿಟ್ಟಿದೆಯಂತೆ
ನೆರಳಲ್ಲಿ ಕೂತು ಮತ್ತೆ ಮಾತು ಕೊಡುವೆ
ಕೈಯ್ಯ ಚಾಚಲು ಬರುವೆ ತಾನೆ?
ಒಂದಕ್ಕಿಂತ ಮತ್ತೊಂದು ಮಿಗಿಲು
ಕನಸುಗಳ ಸುವಿಸ್ತಾರವಾಗಿ ವಿವರಿಸಿ
ಕೋಪ, ನಾಚಿಕೆ, ಅಸೂಯೆಗಳ
ಒಟ್ಟೊಟ್ಟಿಗೆ ಕಾಣ ಬಯಸುವಾಗ
ಕನಸಿಂದ ಮರೆಯಾಗದಿರು
ಅದೊಂದೇ ನನ್ನ ನಿನ್ನ ಗೌಪ್ಯ ಸ್ಥಳ
ಮೊದ ಮೊದಲಿಗಾಡಿದ ಮಾತುಗಳೆಲ್ಲ
ಕಾಲಹರಣಕ್ಕೆ ಅಂದುಕೊಳ್ಳಬೇಡ
ಕಡೆ ಮಾತುಗಳನ್ನ ಕಡೆಗಣಿಸಬೇಡ
ನಡು ನಡುವೆ ಬಿಕ್ಕಳಿಸಿ ಮೌನವಹಿಸಿದ್ದೇ
ತೂಕವುಳ್ಳವು ಅಂದುಕೊಳ್ಳದಿರು
ಮನಸಿನ ಕಣ್ಣು ತೆರೆದು
ಹೃದಯದ ಕಿವಿಯಾರೆ ಆಲಿಸಿ ನೋಡು
ಪ್ರತಿ ಮಾತಿನ ಹಿಂದಿನ ಉಸಿರು
ನಿನ್ನದೇ ಜಪಗೈಯ್ಯುತ್ತಲಿರುತ್ತದೆ!!
ಹೂವು ಹಿಡಿದು ಕಾಯುತ್ತೇನೆ
ಆ ಹೂವು ನೀನೇ ಎಂದು ನಂಬಿ
ನೀ ಬಾಡುವುದ ನೋಡಲಾಗದ ನಾನು
ಯಾವ ಅತಿರೇಖಕ್ಕೆ ತಲುಪುತ್ತೇನೋ
ಹೇಳಲಾಗದು ಸಖಿ
ಸುಳ್ಳೆಯಾದರೂ ಸರಿ
ಸ್ವೀಕರಿಸಿ ನಂತರ ಕಸವಾಗಿಸಿದರೂ ಸರಿಯೇ
ಅಲ್ಪ ಪ್ರಾಣದಲ್ಲಿ ಬದುಕಿಬಿಡುತ್ತೇನೆ!!
-- ರತ್ನಸುತ
No comments:
Post a Comment