Monday, 29 December 2014

ಅಮಾನವೀಯತೆಯೆದುರು

ಬಂದೂಕ ಬಾಯಲ್ಲಿ ಹೊರಟಾದೋ ಸಿಡಿ ಮದ್ದು
ಎಳೆಗೂಸ ಕಣ್ಣೀರು ಲೆಕ್ಕಕ್ಕೆ ಇಲ್ಲ
ನೆತ್ತಾರ ಮೇಲ್ಮೆಟ್ಟಿ ಜಾರಿದ್ದು ಜನರಲ್ಲ
ಮನುಕುಲದ ನಿಸ್ಸಹಾಯಕ ಬಾಳು ಕಾಣೋ

ಮುಖವನ್ನು ಮರೆಸಿಟ್ಟು ಹಲ್ಲನ್ನು ಮಸೆದವರು
ಹಾಲು ದಂತದ ಗೋಳ ಆಲಿಸಲೇ ಇಲ್ಲ
ಗೋಡೆಗಳು ದಿಗಿಲಾಗಿ ಮೈದೆರೆದುಕೊಂಡವು
ಒರಟಾಗಿ, ಜಿಡ್ಡಾಗಿ, ಕೆಂಪು-ಕಪ್ಪಾಗಿ

ಬಳಪಕ್ಕೆ ಅಂಟಿದ್ದು ಪುಟ್ಟ ಕಂದನ ರಕ್ತ
ಬೆತ್ತವೂ ರಕ್ಷಣೆಗೆ ಧಾವಿಸದೆ ಉಳಿದು
ಕಿಟಕಿ ಗಾಜಿನ ಒಳಗೆ ನುಸುಳಿದ ಬಿಸಿಲಿಗೆ
ದೃಷ್ಯ ಜೀರ್ಣಿಸಿಕೊಳ್ಳಲಾಗುತಿಲ್ಲ

ಒಂದಲ್ಲ ಎರಡಲ್ಲ ನೂರು ದಾಟಿದ ಸಂಖ್ಯೆ
ಎದೆ ಬಡಿದುಕೊಂಡವರೂ ಸತ್ತರಲ್ಲಿ
ಉದ್ದೇಶ ಏನಾದರೇನಂತೆ ಸುಡುಗಾಡು
ಆತ್ಮಗಳ ಕೊನೆ ಉಸಿರ ಗೋಳಂತೂ ಘೋರ

ಮತಿಗೇಡಿ ಹೇಡಿಗಳೇ ಎಲ್ಲಿ ಅಡಗಿದೆ ನಿಮ್ಮ
ಬಂದೂಕಿನ ಸದ್ದು ಈಗ ಗೌಣ?
ಯಾವ ಶಕ್ತಿಯೂ ಬೇಡ ನಿಮ್ಮ ಹುಟ್ಟಡಗಿಸಲು

ಕೊಲ್ಲುವುದು ನಿಮ್ಮನು ಸ್ಮಶಾಣ ಮೌನ!!

-- ರತ್ನಸುತ

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...