ಕಗ್ಗತ್ತಲಲ್ಲಿ ದೀಪದ ಬೆಳಕು
ಎಷ್ಟು ಉಪಯುಕ್ತ ಅನಿಸುವುದಲ್ಲ?
ಹಸಿವಾದಾಗ ನಿನ್ನ ಒಣ ತುಟಿಗಳೂ ಅಂತೆಯೇ
ಅಬ್ಬಬ್ಬ ಅದೆಷ್ಟು ಸ್ವಾದಿಷ್ಟ!!
ಚಳಿಗಾಲಕ್ಕೆ ಒಡೆದ ಕೆನ್ನೆಗೆ
ಹಾಲಿನ ಕೆನೆಯ ಲೇಪನ ಕೊಟ್ಟರೆ ಲೇಸು
ಕಳ್ಳ ಬೆಕ್ಕಿನಂತೆ ಮೂಸಿ ಬರುವೆ,
ಒಲೆಯ ಮೇಲೆ ಚೆಲ್ಲಿದ ಹಾಲಿನ ಕಲೆ
ಈಗ ನಿನ್ನ ಕೆನ್ನೆ ಮೇಲೆ!!
ಕಂಬಳಿಗೆ ಅಂಟಿದ ಹಣೆಯ ಬೊಟ್ಟು
ಅಪ್ಪಿ ತಪ್ಪಿ ನನ್ನ ಬೆನ್ನೇರಿದರೆ
ಭಾರ ಹೊರಲಾರದೆ ಬಾಗುತ್ತೇನೆ
ನಿನ್ನಂದಕ್ಕೆ ತಲೆ ಬಾಗಿದಂತೆ
ಒಂದು ಸುಳ್ಳು, ಮೇಲೆರಡು ನುಡಿದು
ಸಿಕ್ಕಿ ಬೀಳುವಾಗ ಕ್ಷಮೆ ಕೋರುವ
ನನ್ನ ಸಾಹಸದ ಉದ್ದೇಶ
ನೀ ನನಗೆ ಘೋರ ಶಿಕ್ಷೆ ನೀಡಲೆಂದೇ;
ಹೀಗಾಗಿಯೇ ನಾ ತಪ್ಪಿತಸ್ಥನಾಗಿ ತೃಪ್ತ!!
ತೆಗೆ, ನಿನ್ನ ನಾಟಕ ಬಯಲಾಯ್ತು
ನಾನೂ ಅದರೊಳ ಪಾತ್ರವಾಗಿಹೆನಲ್ಲ;
ನಲ್ಲ? ನಾ ಹಾಗನ್ನಲಿಲ್ಲವಲ್ಲ
ನಿನ್ನಲ್ಲೂ ಗೊಂದಲವಿದ್ದುದ್ದರಿಂದಲೇ
ಹಾಗೆ ಕೇಳಿಸಿರಬೇಕು;
ಅಂತೆಯೇ ಆದರೆ ಎಂಥ ಸೊಗಸು?!!
-- ರತ್ನಸುತ
No comments:
Post a Comment