Friday, 5 December 2014

ಒಂದೇ ನೋಟದಲಿ ಹಿಡಿಸಿ

ಆ ಬಿಡಿಗೂದಲನ್ನ ಹಿಡಿಮಾಡಿ
ಸಪೂರ ಕತ್ತಿನ ಒಂದು ಬದಿಗಿಟ್ಟು
ಮತ್ತೊಂದು ಬದಿಯ
ಮಚ್ಚೆಗಳನ್ನೆಣಿಸುವ ಕೆಲಸಕ್ಕೆ
ಕೂಲಿ ಕೇಳಿದರೆ
ನನ್ನ ಪೋಲಿ ಅನ್ನಬೇಡ!!
ಪಾರದರ್ಶಕ ಗಾಜಿನಾಚೆ
ನೀ ಹಾದು ಹೋಗುವಾಗೆಲ್ಲ
ನನಗಷ್ಟೇ ಕೆಳಿಸುವ ಹಾಡನ್ನ
ನಿನಗೂ ಹಾಡಿ ತಿಳಿಸುವಾಸೆ;
ಆದರೇನು ಮಾಡಲಿ,
ಪ್ರತಿ ಸಲವೂ ಹೊಮ್ಮುವ ಹಾಡು
ಬೇರೆ ಬೇರೆ ಆಯಾಮದಲ್ಲಿ
ನನ್ನ ಮಗ್ನಗೊಳಿಸುತ್ತಿದೆ,
ಹಿಡಿದಿಡುವುದೇ ಕಷ್ಟವಾಗಿ ಹೋಗಿದೆ!!
ಸಣ್ಣ ನಗುವಿನ ಲಕ್ಷಣಗಳು
ಆ ನಿನ್ನ ಕಣ್ತುದಿಯಲ್ಲಿ ರಾರಾಜಿಸುವಾಗ
ರಂಗಾದ ಕೆನ್ನೆಯ ಮೇಲೆ
ಚಿಟ್ಟೆಗಳ ಹಿಂಡು,
ಬಣ್ಣಗಳ ಕಲರವ;
ಮೆಲ್ಲಗೆ, ಇನ್ನೂ ಮೆಲ್ಲಗೆ
ಅರಳುವ ತುಟಿಗಳ ಕಾಣಲು
ತಾರಾಗಣದ ತವಕವೆಂಬಂತೆ
ಆಗಸದಲ್ಲೊಂದು ಸಂಭ್ರಮ;
ನನ್ನ ಪಾಲಿಗೆ ಆ ಅಮೃತ ಗಳಿಗೆ
ಇನ್ನಷ್ಟು ಅನುಪಮ!!
ಮೆಟ್ಟಿದ ಸೋಪಾನಕ್ಕೆ ಜೀವ ಬಂದು
ಸೋಬಾನೆ ಪದ ಹಾಡಿ
ನಿನ್ನ ಗೆಜ್ಜೆ ತಾಳಕ್ಕೆ ಸೋಲುವಾಗ
ಕಲ್ಲು ಹೃದಯ ಯಾವ ಲೆಕ್ಕ?
ತಾನೂ ಶಿರ ಬಾಗಿ
ಸೋಲುವುದೇ ಪ್ರತೀತಿ;
ಅರೆ!!
ಆಗಲೇ ಕೂದಲ ಕಟ್ಟಿ
ಜೀವ ಹಿಂಡ ಬೇಡ
ಉಸಿರಿಗೂ ನಿನ್ನ ಸೋಕುವ ಭಾಗ್ಯ ಸಿಗದಿದ್ದರೆ
ಸಾವಿಲ್ಲ!!
                                       -- ರತ್ನಸುತ

1 comment:

  1. ಸುಮ್ಮನೆ ಈ ಕವನದಲ್ಲಿ ಪಾತ್ರವೆತ್ತ ಆ ಕಾವ್ಯ ಕನ್ನಿಕೆಯನ್ನು ಕಲ್ಪಿಸಿಕೊಂಡೆ. ವಾವ್...
    ರಸಿಕ ಕವಿಯೇ ಏನಪ್ಪಾ ನಿನ್ನ ಇಮ್ಯಾಜಿನೇಸನ್ನೂ...

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...