Friday, 5 December 2014

ಇಂದಿನ ನಾಯಕರ ದರ್ಬಾರು

ನಡುವೆ ಹಲಗೆ ಬಾರಿಸಿಕೊಂಡು
ಕಿವಿಯ ಕಿಕ್ಕಿರಿದ ಸದ್ದು,
ಮುಂದೆ ಅಮಲೇರಿದ ಮಂದಿಯ
ಭಾರಿ ಕುಣಿತ,
ಹಿಂದೆ ಬಲಗೈ ಬಂಟರ
ಬಲಿತ ತೋಳ್ಗಳ ಸಾಲು;
ಅದು ಹಬ್ಬದ ಸಡಗಲವಲ್ಲ;
ಕಾಂಚಾಣದ ಉರುಳಿಗೆ ಕುತ್ತಿಗೆ ಕೊಟ್ಟ
ಕುರಿಗಳ ದಂಡು ಮೆರವಣಿಗೆ;
ಕಟುಕ ಹೊಟ್ಟೆ ಬಾಕರ ಹಸಿವಿನ
ಮುಂಗಡ ಪ್ರಚಾರ ಡಿಂಡಿಮ.
ಅಲ್ಲಿ ಜೈಕಾರ ಹೊಡೆಯುತ್ತಿದ್ದವರೆಲ್ಲ
ಪುಡಿಗಾಸಿಗೆ ಮುತ್ತಿಕೊಂಡ ನೊಣಗಳು,
ಲೋಟ ಚಹ, ಚಿತ್ರಾನ್ನ ಪೊಟ್ಟಣಕ್ಕೆ
ಜೊಲ್ಲು ಸುರಿಸುವ ಜೊಳ್ಳು ತಲೆಯವರು
ಪೊಳ್ಳು ಬೆಂಬಲಿಗರು!!
ಪಟಾಕಿ ಹೊಗೆಯಿಂದೀಚೆಗೆ
ಅಸ್ತಮಾ ಪೀಡಿತರ ನಿಸ್ಸಹಾಯಕ ನಿಲುವು,
ಅದೇ ಪುಂಡಾಟಿಕೆಯ ಗೆಲುವು;
ನಾಯಕನೆಂದು ಕರೆಸಿಕೊಳ್ಳಲು
ಮೂರು ದಿನದ ಅಧಿಕಾರದ ತೀಟೆ ತೀರಿಸಿಕೊಳಲು
ಅಖಾಡಕ್ಕಿಳಿದ ಬೇನಾಮಿ ಧಿಮಾಕಿನ ಮೃಗವೊಂದು
ಕೈ ಮೇಲೇರಿಸಿ
ತಾನೂ ಸ್ವಚ್ಛ ಹಸ್ತ ಹೊಂದಿರುವುದಾಗಿಯೂ
ತಾನೊಬ್ಬ ಸಾಚಾ ಎಂಬುದಾಗಿಯೂ ನಂಬಿಸಲು
ಹರ ಸಾಹಸ ಪಡುತ್ತಿದ್ದುದ
ಕುಡುಕನೂ ನಿಖರವಾಗಿ ಪತ್ತೆ ಹಚ್ಚಬಹುದಿತ್ತು!!
"ಇದೇ ಕೊನೆ
ನಾಯಕರಿನ್ನು ಟಿ.ವಿ ಪರದೆಯ ಹಿಂದಷ್ಟೇ
ಕಾಣಿಸೋದು;
ನೋಡುವವರು ಸರಿಯಾರಗಿ ನೋಡಿಕೊಳ್ಳಿ
ನಂತರ ಬೇಸರ ಬೇಡ"
ವ್ಯಂಗ ಆಡುತ್ತಿದ್ದ ಕಟ್ಟೌಟ್ಗಳು
ಊರ ತುಂಬ ಹಬ್ಬಿಕೊಂಡಿದ್ದವು!!
ಪಟಾಕಿ ಹೊಗೆ ಮುಗಿಲ ಮುಟ್ಟಿತು
ನಾಯಕರು ಊರ ಬಿಟ್ಟರು!!
                                      -- ರತ್ನಸುತ

1 comment:

  1. ಚಲಾವಣೆ ಇಲ್ಲದ ಪುಢಾರಿಯ ಮನೆಯಂಗಳದಲ್ಲಿ ಸ್ಮಶಾನ ಮೌನ!

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...