ಕೋಳಿ ಸಾರಿಗೂ ಬೇಳೆ ಸಾರಿಗೂ
ಒಂದೇ ಬೇಗೆಯ ಒಲೆಯಲ್ಲ
ಸ್ನೇಹ ಮಳೆಯಲಿ ಪ್ರೀತಿ ಕೊಡೆಯನು
ಹಿಡಿದು ನಿಂತರೆ ತರವಲ್ಲ
ಗಂಡು ಗಟ್ಟಿಗ ಹೆಣ್ಣು ಕೋಮಲೆ
ಯಾವ ಕೋನವೂ ಕೂಡಲ್ಲ
ಅದರೂ ಪ್ರತಿ ಸ್ಟೋರಿಯಲ್ಲಿನ
ಕ್ಲೈಮ್ಯಾಕ್ಸು ಬದಲಾಗಲ್ಲ
ಹಾಡು ಗೀಚುತ ಮಣ್ಣು ಅಗೆವುದು
ಇಬ್ಬರಲ್ಲೂ ಒಂದೇ ಗುಣ
ಒಪ್ಪಿಕೊಂಡರೆ ಹೂವ ನೆಡುವರು
ಇಲ್ಲ ಹೃದಯ ಸತ್ತ ಹೆಣ
ಅವಳ ಕಂಬನಿ ಇವನ ಹಸ್ತಕೆ
ಇವನ ಜೇಬು ಅವಳ ಕಡೆ
ಇವರ ಪ್ರೀತಿ ಇವರಲ್ಲೇ ಗುಟ್ಟು
ರಟ್ಟಾಯಿತಾಗ್ಲೇ ಎಲ್ಲಾ ಕಡೆ
ಮದುವೆಯಲ್ಲಿ ಕೊನೆಗೊಳ್ಳಲಿಕ್ಕೂ
ಬಲವಾದ ಕಾರಣ ಬೇಕಿದೆ
ನಡುವೆ ಜಗಳ ಆಗೋದು ಸಹಜ
ಅನುಮಾನ ಉಳಿಯದು ಸೋಲದೆ
ಹಳೆ ಒಲೆಯ ಹಸಿ ಸೌದೆ ಉರಿಗೆ
ಮೇಲೆದ್ದ ಹೊಗೆಯೇ ಲವ್ ಸ್ಟೋರಿಯು
ಸಾರಿ ಸಾರಿ ತಲೆ ಚಚ್ಚಿಕೊಂಡು
ನಗುವವರೇ ಇಲ್ಲಿ ಪ್ರತಿ ಬಾರಿಯೂ
ಕ್ಷಮಿಸಬೇಕು ನಿಷ್ಠಾವಂತರು
ಕೋಪಗೊಳ್ಳದೆ ಕೇಳಿರಿ
ಆತುರಕ್ಕೆ ಬಲಿಯಾಗಬೇಡಿ
ಒಳ್ಳೆ ಸಮಯಕ್ಕೆ ಕಾಯಿರಿ
-- ರತ್ನಸುತ
No comments:
Post a Comment