ಮೇಲೆತ್ತಿ ಪಿನ್ನೊಡೆದ ಕುರುಳು
ನನ್ನ ಭುಜದೆತ್ತರಕೆ ತಲುಪಿತಲ್ಲ
ಮೂಗುತ್ತಿ ಮಿಂಚೊತ್ತು ತರಲು
ಕಣ್ಣ ಸುಡುವಷ್ಟು ಹೊಳಪಾಯಿತಲ್ಲ
ಗೋರಂಟಿ ರಂಗಲ್ಲಿ ನನ್ನ-
ಬಿಡಿಸಿ ಹೌಹಾರಿಸೋ ಸಂಚು ನಿನದು
ಬೆರಳಾದರೇನಂತೆ ತಾನೂ
ನನ್ನ ನಾಚಿಕೆಗೆ ಕಾಯುತಿರಬಹುದು
ಹಣೆಯೇರಿ ಜಾರುವುದೇ ಗೀಳು
ಈ ಬೆವರನ್ನ ತಡೆವವನೇ ಶೂರ
ನೀನಾದೆ ಇನ್ನಷ್ಟು ಸನಿಹ
ನನ್ನ ನೆರಳಿನ್ನು ಉಳಿದಂತೆ ದೂರ
ಕೊಟ್ಟದ್ದು ಬಲು ಕಮ್ಮಿ ಕೇಳು
ಕೊಡದವುಗಳನ್ನು ಪಟ್ಟಿಡಿದು ಕೂತು
ಪ್ರಾಣವಾದರೂ ಯಾವ ಲೆಕ್ಕೆ
ನಿನಗೆ ತಲೆಬಾಗಿ ನೀಡುವೆನು ಸೋತು
ಕನಸಲ್ಲಿ ಖಾಲಿಯಿದೆ ಜಾಗ
ಬೇಕು ನಿನ್ನಂತವಳು ಅಲ್ಲಿ ಪೂರ
ಹಿಡಿದಾಗಿದೆ ಒಲವ ಹಾದಿ
ಮೂರೇ ಗೇಣಿಗಲ್ಲಿ ಸ್ವರ್ಗ ದ್ವಾರ!!
-- ರತ್ನಸುತ
No comments:
Post a Comment