Friday, 5 December 2014

ಒಂದಿಷ್ಟು ಸಂತೋಷಕ್ಕೆ!!

ಬಣ್ಣದ ನೇಗಿಲು ಇನ್ನೂ ಮಾಸಿಲ್ಲ,
ಭೂಮಿಯ ಋಣ ತೀರಿರಬೇಕು;
ಇನ್ನು ಅದು ಗೂಟಕ್ಕೆ ಜೋತ
ಕೆಲಸಕ್ಕೆ ಬಾರದ ಹಳೆ ಸರಕು!!
ಮಣ್ಣಲ್ಲಿ ಮಣ್ಣಾಗಿ
ತನ್ನನ್ನೇ ತೇಯ್ದ ಮತ್ತೊಂದು
ಮೌನದ ಸಮರ ಸಾರಿ
ಈಗ ಗೆಲುವಿನಲ್ಲಿ ಘರ್ಜಿಸುತ್ತಿದೆ;
ಬಳ್ಳ ಬಳ್ಳಗಳ ಹೊಟ್ಟೆ ತುಂಬಿ
ಚೀಲಗಳು ಭರ್ತಿಯಾಗುತ್ತಿವೆ,
ಕಣ ಮಾಡಲಾಗದೆ
ಆಧುನೀಕರಿಸಿದ ಡಾಂಬರು ರಸ್ತೆಗಳ ಮೇಲೆ
ದವಸದ ರಾಶಿ, ಹುಲ್ಲ ಕುಪ್ಪೆ!!
ರಸ್ತೆ ಉದ್ದಗಲಕ್ಕೂ ಹಾಸಿದ
ಒಣ ಪೈರು
ಗುಂಡುಕಲ್ಲಿಗೆ ತಲೆ ಚಚ್ಚಿಕೊಳ್ಳಲು
ತುಡಿಯುತ್ತಿದೆ
ರಬ್ಬರ್ ಟೈರ್ಗಳ ಬಿಸಿಗೆ
ಮನಸೊಪ್ಪದೆ ಮುರಿದು ಬಿದ್ದು;
ಹೇಗೋ ಹಾಗೆ ಮಳೆ ಬಿದ್ದು
ರೈತ ನಕ್ಕಂತಾಯ್ತು
ದೇವರಿಗೂ ಹಿಡಿ ಶಾಪ ತಪ್ಪಿ
ತಾನೂ ತೀರಿದ ಹರಕೆಯಿಂದ ತೃಪ್ತ!!
ಬಡಕಲು ಹೆಗ್ಗಣಗಳು
ಗುಂಡಿ ತೋಡಿಕೊಳ್ಳುತ್ತಿವೆ ಗುಡಾಣಗಳಲ್ಲಿ;
ಬೆಳೆದ ಅರ್ಧದಲಿ ಅರ್ಧ ಮಾತ್ರ ರೈತನಿಗೆ
ಮಿಕ್ಕೆಲ್ಲ ಲಾಭ ಮಧ್ಯವರ್ತಿ ಹೆಗ್ಗಣಗಳಿಗೆ!!
ಆಕಾಶ ನಿಟ್ಟುಸಿರಿಟ್ಟೂ
ಹನಿ ಜಾರಿಸುವಂತಿಲ್ಲ
ಯುದ್ಧ ಮುಗಿಯುವನಕ ಮುಗಿದಂತಲ್ಲ;
ಯೋಧನ ಬೆವರು ನೆಲ ತಾಕಿ
ಫಲವತ್ತಾದರಷ್ಟೇ
ಸರದಿ ಸಾಲಿನ ಬೆಳೆ
ಮೈ ನೆರೆಯಲು ಅವಕಾಶ
ಎಲ್ಲವೂ ಸುಖಾಂತ್ಯ ಕಂಡರೆ
ಈಡುಗಾಯಿ ಚೂರುಗಳಿಗೂ
ಜೀವ ಬಂದಂತೆ!!
                               -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...