Tuesday, 6 May 2014

ಪ್ರೀತಿಯಲಿ ಈವರೆಗೆ

ಕಣ್ಣಲ್ಲಿ ಧೂಳು ಬೀಳೋಕೂ ಮುನ್ನ
ನೀನೊಮ್ಮೆ ನೋಡು ನನ್ನ
ಮಡಿಲಲ್ಲೇ ಇದ್ದು ಕೊನೆ ಮಾತನಾಡಿ
ನಾ ಬಿಡುವೆ ಪ್ರಾಣವನ್ನ

ಉಸಿರಲ್ಲಿ ಕೂತು ನಿನ್ನಂತರಂಗ
ನಾ ನೋಡಿ ಬರುವ ಆಸೆ
ಮಂಜಂತೆ ಕರಗಿ ನೀರಾಗಿ ಬಿಡುವೆ
ನೀನೊಮ್ಮೆ ನಗುವ ಸೂಸೆ

ಅಲ್ಲಲ್ಲಿ ನೀನು ಬಿಡುವಂಥ ಗುರುತೇ
ನನಗೊಂದು ದಾರಿ ದಿಕ್ಕು
ಹೆಚ್ಚೇನು ಬೇಡ ಈ ಬಾಳಿಗೊಂದು
ಸಿಹಿ ನೆನಪ ನೀಡು ಸಾಕು

ಅಂಗೈಯ್ಯ ಮೇಲೆ ಧ್ಯಾನಕ್ಕೆ ಕೂತು
ನಾ ಕಣ್ಣು ಮುಚ್ಚುವಾಗ
ಮೈ ಶಾಖವನ್ನು ಅನುಭವಿಸಬೇಕು
ನೀ ನಡುಗಿ ಬೆಚ್ಚುವಾಗ

ತಪ್ಪಾಗುವಂತೆ ನಡೆದಾಗ ಒಮ್ಮೆ
ನೀ ತೋರು ಚೂರು ಮುನಿಸು
ನೀ ಸೋಕಿದಾಗ ಬರಡಾದವೆಲ್ಲ
ತಂತಾನೆ ಹಸಿರುಗನಸು

ಕಾದಾಟದಲ್ಲಿ ಸೋತಲ್ಲೂ ಸೊಗಸು
ವಿಸ್ಮಯವೇ ಪ್ರೇಮ ಯುದ್ಧ
ಇರಿದಿರಿದ ನಿನ್ನ ಹೆಚ್ಚೆಚ್ಚು ಬಯಸಿ
ನಾ ಅಮರ ಪ್ರೇಮ ಯೋಧ!!

                            -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...