Friday, 23 May 2014

ನೆನಪಿನ ರೈಲು

ನೆನಪಿನ ರೈಲಿಗೆ
ಅದೆಷ್ಟು ಬೋಗಿಗಳೋ
ಲೆಕ್ಕ ಹಾಕುತ್ತಲೇ ಸೋಲಬೇಕು!!

ಇಂಜಿನ್ನಿಗೆ ಬಿಡುವೇ ಇಲ್ಲ;
ಒಂದೇ ಸಮನೆ ಸಾಗಿಸುತ್ತಿದೆ
ಇದ್ದ-ಬದ್ದ ಸರಕನ್ನೆಲ್ಲ ಎಲ್ಲಿಂದೆಲ್ಲಿಗೋ!!

ಅಲ್ಲಲ್ಲಿ ಚೂರು ನಿಧಾನಿಸಿ
ಹತ್ತಿಳಿದವರ, ಹತ್ತಿಳಿಸಿದವುಗಳ
ಬೆಂಬಲಕ್ಕೆ ಸಣ್ಣ ತಗಡು ದ್ವಾರ;

ಉಳಿದವರು, ಇಳಿದವರು
ಹತ್ತಲಿರುವವರು, ಹತ್ತದಿರುವವರಿಗೂ
ಒಂದು ಮೀಸಲಾತಿಯಿದೆ;
ಮುಂಗಡ ಪಾವತಿ, ತತ್ಕಾಲಿನ ಗೋಜಲು
ಉದ್ದ ಸಾಲು, ಸಮಯ ಪೋಲು
ಯಾವ ಪೀಕಲಾಟವೂ ಅಲ್ಲಿಲ್ಲ!!

ಈತನಕ ಯಾವತ್ತೂ ಕೆಡದ ಇಂಜಿನ್ನು,
ಸವೆಯದ ಹಳಿ-ಚಕ್ರಗಳು,
ತುಕ್ಕು ಹಿಡಿಯದ, ಸೋರದ ಉಪ್ಪರಿಗೆ,
ಹರಿದುಹೋಗದ ಸೀಟು,
ಪ್ರಶಾಂತ ಪಯಣಕ್ಕೆ ಅಡ್ಡಗಟ್ಟದ ಟಿ.ಟಿ.ಇ,
ತುಟ್ಟಿ ಅನಿಸದ ಪ್ರಯಾಣ ದರ!!
ನೆನಪಿನ ರೈಲು ನಿಜಕ್ಕೂ ದಯಾಮಯಿ!!

ಕೊನೆಯ ನಿಲ್ದಾಣದ ಸುಳುವೂ ಕೊಡದೆ
ಗುಪ್ತತೆಯ ಕಾಯ್ದುಕೊಂಡ ರೈಲಿಗೆ
ಅಸಲಿಗೆ ಮೊದಲಾದುದ್ದೇಲ್ಲೋ ನೆನೆಪಿಲ್ಲ;
ನೆನಪಿಗೇ ನೆನಪಿಲ್ಲವೆಂದು ನಗದಿರಿ!!
ಪಾಪ, ಅದೆಷ್ಟು ಹೊರೆ ಹೊತ್ತಿದೆ!!
ಮರುವಿಗೆ ಕ್ಷಮಾರ್ಹ ಈ ನೆನಪು!!

ಹಬ್ಬದ ನೆನಪುಗಳ ಹೊಸ ಉಡುಗೆಯ ಕಂಡು
ಮರುಗಿದ ಚಿಂದಿ-ತೇಪೆಯುಟ್ಟ ಬಡಪಾಯಿಗಳಿಗೆ
ಮಧ್ಯವರ್ತಿಗಳ ಸಾಂತ್ವನ!!
ಒಟ್ಟಾರೆ, ಎಲ್ಲಕ್ಕೂ ಇದೆ ಇಲ್ಲಿ ಸನ್ಮಾನ!!

ಸದ್ದು ಮಾಡದೆ ಸಮೀಪಿಸುತಿದೆ 
ಹಸಿರು ಬಾವುಟವ ಹಿಡಿದ ಮನಸಿನೊಳಗೆ
ಸರಕು ಇಳಿಸಲು, ಹೊರೆಸಲು ಕೂಲಿಗಳಿಲ್ಲ
ಎಲ್ಲವೂ ಮನಸಿನದ್ದೇ ಹೊರೆ!!

                                         -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...