Thursday, 8 May 2014

ಹಕ್ಕಿ ಮತ್ತು ನಾನು

ನನ್ನಂತೆಯೇ ಕಾಣುವ ಹಕ್ಕಿ
ನನ್ನ ಮೀರಿ ಹಾರುತ್ತಿದೆ ದಿಗಂತದಾಚೆ
"ಅರೆ; ನಿನಗೆ ರೆಕ್ಕೆಗಳಿಲ್ಲ, ಪುಕ್ಕಗಳಿಲ್ಲ
ನೀ ಹೇಗೆ ಅದರಂತೆ?" ಕೇಳಿತು ಮತ್ತೊಂದು ಹಕ್ಕಿ!!

ಇದು ಅಂತಃಕರಣದ ಸಾಮ್ಯತೆ,
ಹೊರನೋಟಕ್ಕೆ ನಾನೇ ಬೆರೆ, ಹಕ್ಕಿಯೇ ಬೇರೆ
ಒಳಗಿನ ಬೇಗುದಿಯ ಪರಿಮಿತಿಗೆ 
ನಾ ಅದರ ಸಾಧನ, ಅದು ನನ್ನದು!!

ನಾ ಒಬ್ಬಂಟಿಗ, ಅದೂ ಒಬ್ಬಂಟಿ;
ಇಲ್ಲವಾದರೆ ನಾ ಬೇಸರದ ಕಾಳುಗಳ
ಎರಚುವಾಗ ಅದೊಂದೇ ಹಾರಿ ಬಂದು
ಕೊಕ್ಕಿನಲ್ಲಿ ಹೆಕ್ಕಿ ಹಾರುವ ಬದಲು
ಅಲ್ಲೇ ಉಳಿದು ನನಗಾಗಿ ಬಿಕ್ಕುತ್ತಿರಲಿಲ್ಲ
ನಾನೂ ಅದ ಕಂಡು ಹನಿಯುತ್ತಿರಲಿಲ್ಲ!!

ದಿನಾಲೂ ಇದೇ ಆಗಿತ್ತು;
ನಾ ಅಳುವುದು, ತಾ ಅಳುವುದು,
ಇಬ್ಬರಿಗಿಬ್ಬರೂ ಅತ್ತು ಸುಮ್ಮನಾಗುವುದು;
ಒರೆಸುವ ಕೈ ಮಾತ್ರ ದೂರ-ದೂರ!!
ಕಣ್ಣೀರೂ ಒಂದು ಭಾಷೆ 
ಅರಿತುಕೊಂಡೆವು ಇಬ್ಬರ ನೋವುಗಳ;

ತನ್ನ ಮನದ ತೆಕ್ಕೆ ಶಿಥಿಲವಾದುದ
ಅದೆಷ್ಟು ಸಲೀಸಾಗಿ ಅರಿತುಕೊಂಡೆ!!
ಮೂಖ ಮನಸಿನ ಭಾವಸ್ಪಂದನ
ತಂತಾನೇ ಜರುಗಿತ್ತು;
ಆದಷ್ಟೂ ಕೊರತೆಗಳು
ಕಣ್ಣಲ್ಲೇ ವಿನಿಮಯಗೊಂಡವು!!

ಇಬ್ಬರಲ್ಲೂ ವಿರಕ್ತ ಭಾವ
ನನ್ನ ಗುರಿ ಮಣ್ಣಿನತ್ತ 
ಅದರದ್ದು ದೂರ ದಿಗಂತ
ಇಬ್ಬರೂ ಒಟ್ಟೊಟ್ಟಿಗೆ 
ಮೋಕ್ಷ ಪಡೆದುಕೊಳ್ಳುವವರಿದ್ದೇವೆ !!

                               -- ರತ್ನಸುತ

1 comment:

  1. ಹಕ್ಕಿಗಿರುವ ಒಂದು ಸವಲತ್ತು ನಮಗೆಲ್ಲಿದೆ ಗೆಳೆಯ, ಅದು ಹಾರಬಲ್ಲದು ಸೀಮೆಗಳ ದಾಟಿ.
    ಅದಕಿಲ್ಲ ಅನುಮತಿ ಪಜೀತಿ...

    ReplyDelete

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...