Friday, 30 May 2014

ಆತ್ಮಾಹುತಿ

ನನ್ನ ಕೈಗೆ ಬಂದೂಕು ಕೊಟ್ಟು
ಬೆನ್ನು ಮಾಡಿ ಸಾಲಾಗಿ ನಿಂತವರ
ಅಮಾನುಷವಾಗಿ ಕೊಲ್ಲು ಅಂದರು;
ಬೇಕಂತಲೇ ಗುರಿ ತಪ್ಪಿಸಿ ಬಿಟ್ಟೆ

ಇನ್ನೂ ಹತ್ತಿರ ಕೊಂಡೊಯ್ದು ,
ಬಂದೂಕಿನ ಬಾಯನ್ನ ತಲೆಗೆ ಆನಿಸಿ
ಕುದುರೆಯ ಕೀಲಿಗೆ ಬೆರಳನು ನೆಟ್ಟು
"ಗೋ" ಅಂದರು; ಗುರಿ ತಪ್ಪಿಸಿಬಿಟ್ಟೆ!!

ಯಾರಿಗೂ ನೋವುಂಟು ಮಾಡಬಾರದೆಂಬ
ಜೀವನದ ಮಹತ್ವಾಕಾಂಕ್ಷಿ ಗುರಿ ಅದು;
ಸುತ್ತಲೂ ಕರತಾಡನದ ಸದ್ದಿನಲೆ,
ನಾನ್ನಲ್ಲಿಯ ಅಪರಾಧಿ ಎಚ್ಚರವಾಗುತ್ತಿದ್ದಾನೆ!!

ಉರುಳಿದ ಹೆಣಗಳು, ಬದುಕಿದ್ದ ಆ
ಕೊನೆ ನಿಮಿಷದವರೆಗೂ ಗುಸುಕ್-ಪಿಸುಕ್ ಅನ್ನದೇ
ಸತ್ತಾಗ ಜೀವನ ಪ್ರೀತಿಯಿಂದ ಒಂದೇ ಬಾರಿ ಚೀರಿ ಮುಗ್ಗರಿಸಿದವು
ನಾನ್ಯಾರೋ? ಅವರ್ಯಾರೋ? ಪರಸ್ಪರ ಪರಿಚಯವಿಲ್ಲ!!

ಮುಖ ನೋಡುವ ಆಸೆಯಿಂದ ಒಂದನ್ನ
ಹಿಂಜರಿಕೆಯಿಂದ ಇದ್ದಲ್ಲೇ ಹೊರಳಿಸಿದೆ
ಸೀಳು ಬಿಟ್ಟ ಬುರುಡೆಯಿಂದ ಚಿಮ್ಮಿದ ರಕ್ತದ ಮಡುವಲ್ಲಿ
ಮೆದುಳು, ಕಣ್ಗುಡ್ಡೆ ರಕ್ತಸಿಕ್ತವಾಗಿದ್ದವು

ಎಲ್ಲವನ್ನೂ ಸರಿಸಿ, ಅಂಗಿಯ ಅಂಚಿನಿಂದ
ಮೆದುವಾಗಿ ಸವರಿದಾಗ, ಅಲಾಸ್!!
ಅದು ನಾನೇ!! ಮಿಕ್ಕವರೆಲ್ಲ ನನ್ನವರು
ಸಿಡಿಸಿದವರೂ ನನ್ನವರೇ.... ಸತ್ತವರೂ ಅವರೇ!!

ನಾ ಬದುಕಿದ್ದೂ ಸತ್ತಿದ್ದೆ
ಚಪ್ಪಾಳೆ ನುಂತಿತು;
ಎಲ್ಲರೂ ಉರುಳಿ ಬಿದ್ದರು
ಕಡೆಗೆ ನಾನೂ ಬಿದ್ದೆ...!!

-- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...