Thursday, 8 May 2014

ಬೊಂಬಾಟ್ ಬಾಡೂಟ

ವಿಸ್ತಾರವಾದ ಮುತ್ತುಗದ ಎಲೆ ಮೇಲೆ
ಮೂಲೆಯಲ್ಲಿ ಶಾಸ್ತ್ರಕ್ಕಿಷ್ಟು ಉಪ್ಪು,
ಹಿಂದೆಯೇ ಸೌತೆ, ಈರುಳ್ಳಿ, ನಿಂಬೆಯ ಚೂರು;
ಒಂದು ಸುದೀರ್ಘ ಪಯಣ ಬೆಳೆಸಿದ ಹಣೆಯ ಬೆವರು!!

ಅಷ್ಟರಲ್ಲೇ ಮನವನರಿತಂತೆ
ಸ್ಟೀಲ್ ಬಕೆಟ್ಟಿನ ತುಂಬ
ಜಿಡ್ಡು ಪದರವ ಹೊತ್ತ
ಬಿಸಿ, ಬಿಸಿ ಬೋಟಿ ಗೊಜ್ಜು ಎಲೆಯಲ್ಲಿ!!

ಬಿಟ್ಟರೆ ಕಣ್ಣೇ ತಿಂದುಬಿಡಬಹುದು;
ಒಂದೇ ಬೆರಳನ್ನ ಮಸಾಲೆಗೆ ಅದ್ದಿ
ಬಾಯಿಗಿಟ್ಟು ಚಪ್ಪರಿಸುವಂತೆ ತೋಚುತ್ತಲೇ
ಖಾಲಿಯಾಗಿಯೇ ಹೋಗಿತ್ತು!!

ಕಾಯುವ ಮುನ್ನವೇ ಚಿಲ್ಲಿ ಚಿಕನ್,
ಕಬಾಬ್ ತುಂಡುಗಳು
ಬೆಂದ ನಾಲಗೆಯ ಮೇಲೆ ಮತ್ತಷ್ಟು ಬೇಯಲು
ತುದಿ ಮೂಳೆಯ ಮೇಲೆ ನಿಂತಿದ್ದವು !!

ನಿರ್ವಿಕಾರ ಸಿಡಿ ಮದ್ದುಗಳ ಬಾಣಲೆಯಲ್ಲಿ ಕಂಡ
ಮುದ್ದೆಯ ಗುಡ್ಡೆಯಲ್ಲಿ
ಎದೆಗಿಳಿವ ಗುಂಡೊಂದರ ಮೇಲೆ
ನನ್ನ ಹೆಸರೇ ಬರೆದಂತೆ ತೋಚಿತ್ತು!!

ತೀರಾ ಕೊಬ್ಬಿರದ ಕುರಿಯಲ್ಲೂ ಏಟು ಕೊಬ್ಬು?!!
ಎಳೆ ಮಾಂಸದ ಚೂರು, ಹಲ್ಲು ಹೊಕ್ಕ ನಾರು
ಅದರ ಪರಿವಿರದೆ ಮುರಿದ ಮುದ್ದೆಗೆ
ಮೋಕ್ಷ ಕಾಣಿಸಿದ ಮೇಲೆ, ಕಬಾಬಿಗೂ ಮೋಕ್ಷ!!

ಅಲ್ಲಿಗೆ ಮಲಗಿದ್ದ ಉದರದಲಿ ಮಿಂಚಿನ ಸಂಚಾರ,
ಮುಟನ್ ಬಿರಿಯಾನಿಯ ಘಮಲಿಗೆ
ಆಗಲೇ ತಿಂಬಿದ ತಾನು
ಸ್ಥಳಾವಕಾಶಕ್ಕೆ ಸಂಚು ರೂಪಿಸುತ್ತಿತ್ತು!!

ಒಂದು ಲೋಟ ಜೀರಿಗೆ ರಸ,
ಜೊತೆಗೊಂದು ಏಲಕ್ಕಿ ಬಾಳೆ;
ಅಚ್ಚುಕಟ್ಟಾದ ಬಾಡಿಗೆ ಉಪ್ಪಿನಗತ್ಯವೆಲ್ಲಿ?!!
ಮತ್ತೆ ನೀರಲ್ಲಿ ಕಲೆಸಿ ಬಿಟ್ಟೆ!!

ನಿಂಬೆ ಚೂರನು ಹಿಂಡಿ
ರಸವನ್ನ ಮುಂಗೈಗೆ ತಿಕ್ಕುವ ಮುನ್ನ
ಕೊನೆಯದಾಗಿ ನೆಕ್ಕದಿದ್ದರೆ
ಪೂರ್ಣತೆಯ ಪ್ರಾಪ್ತಿ ದೊರೆವುದಾದರೂ ಎಲ್ಲಿ?!!

ಸುಟ್ಟ ನಾಲಗೆಗೆ ಸಕ್ಕರೆಯ ಸುರಿದು
ಚೂರಡಿಕೆ, ಸುಣ್ಣ, ವಿಳ್ಯದೆಲೆ ಸುತ್ತಿ
ಜಗಿದ ಏಟಿಗೆ ಕೆಂಪೆದ್ದ ನಾಲಗೆಯ
ಹೊರಚಾಚಿ ಕಾಣುವ ಹೊತ್ತಿಗೆ 
ಮತ್ತೊಂದು ಪಂಕ್ತಿಯಲ್ಲಿ ಕೂತು
ಮತ್ತಷ್ಟು ಸೊರಗುಟ್ಟುವ ತವಕ!!

                           -- ರತ್ನಸುತ

1 comment:

  1. ಅಯ್ಯೋ ನಮ್ಮನ್ನು ಕರೆಯಲೇ ಇಲ್ಲವಲ್ಲಪ್ಪಾ!!!

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...