Tuesday 6 May 2014

ನೆನಪುಗಳೇ ಹೀಗೆ !!

ಮೂಟೆ ಕಟ್ಟಿ ಬಿಸಾಡಬೇಕು
ಉರುಳಿದವಶೇಷಗಳಡಿಯಲ್ಲಿ
ಸಿಲುಕಿಕೊಂಡ ಅದೆಷ್ಟೋ ನೆನಪುಗಳು
ಉಸಿರಾಟ ನಿಲ್ಲಿಸಿವೆ;
ನೀರು ಚಿಮುಕಿಸಿದರೆ 
ಮರು ಜೀವ ಪಡೆಯಬಹುದೆಂಬ-
ಆತಂಕದಲಿ ಅತಿ ಜಾಗರೂಕತೆಯಲ್ಲಿ
ಅದುಮಿಟ್ಟೆ ಇದ್ದ ಉಸಿರನ್ನ ಉಡಾಯಿಸಿ!!

ವಿರಕ್ತಿಗೊಳಗಾದವುಗಳ ಉಳಿಸಿಬಿಟ್ಟೆ
ಧ್ಯಾನಸ್ಥ ಮನಸಿಗೆ ಬೆಂಬಲವಾಗಿ
ವಿಮುಕ್ತಿ ಬೇಡಿದವುಗಳ ಬುಡ ಸಹಿತ ಕಿತ್ತು
ವಿಮೋಚನೆ ನೀಡಿದೆ;
ಸಮಾದಿಗಳ ಬೇಲಿಯ ಒಳಗೆ
ಮಣ್ಣಿನಡಿಯಲ್ಲಿ ಬೆಚ್ಚಗುಳಿದವುಗಳ-
ಎದೆಗೆ ಗುದ್ದಲಿ ಇಟ್ಟು
ಮಹಲ್ಲುಗಳ ಕಟ್ಟಿ ಬಿಟ್ಟೆ!!

ಈಗಿರುವವುಗಳೆಲ್ಲ
ಬಣ್ಣದುಡುಪು ಧರಿಸಿದ
ನೆನ್ನೆ ಮೊನ್ನೆಯ ಬೆತ್ತಲ
ನವಜಾತ ಶಿಶುಗಳು;
ಸದ್ದು ಮೂಡುವಲ್ಲಿ ತಿರುಗಿ,
ಹದ್ದು ಮೀರುವಲ್ಲಿ ಪಳಗಿ
ಖುದ್ದು ಬೆಳೆದು ನಿಂತು
ಮನದೊಳಗೆಲ್ಲ ಬೇರನ್ನ ಹರಡಿಸಿವೆ!!

ಕಾವಿ ತೊಟ್ಟ ಮನಸಿಗೆ
ನೆನಪುಗಳ ಹಂಗೇತಕೆ?
ಬಹಿಷ್ಕಾರ ಹೇರಿ
ಸುಮ್ಮನಿರಬೇಕಿತ್ತಲ್ಲವೇ ತಾನು?!!
ಬೇಡದ ಕಡೆ ಬಿಟ್ಟುಕೊಂಡಂತೆ
ವೈರಾಗ್ಯದ ಹಾದಿಯ 
ಕ್ಲಿಷ್ಟಗೊಳಿಸಿದ್ದು
ಇದೇ ಮರು ಹಿಟ್ಟಿನ ನೆನಪುಗಳು!!

ಬಹುತೇಕ ದ್ವಂಸವಾದ ಎಲ್ಲವೂ
ಸಣ್ಣ ಸಲುಗೆಯ ಹಿಡಿದು
ಎಳೆದು ಕೂರಿಸುತ್ತಿವೆ ಎಲ್ಲವ;
ನೆನಪುಗಳಿಗೆ ಮರುವಿಲ್ಲ,
ಮರುವಲ್ಲೂ ನೆನೆಪಾಗುತ್ತವೆ!!

                        -- ರತ್ನಸುತ

1 comment:

  1. ಹದ್ದು ಮೀರುವ ಮನಸು, ಮರು ಹಿಟ್ಟಿನ ನೆನಪು ಪೇರಿಸಿಕೊಟ್ಟ ಕವನ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...