Tuesday, 6 May 2014

ಈಗಷ್ಟೇ ನಿಮಿಷದ ಹಿಂದೆ

ಈಗಷ್ಟೇ ನಿಮಿಷದ ಹಿಂದೆ
ನಾನಿದ್ದ ಜಾಗದಲೆಲ್ಲ
ಅರಳಿದ್ದ ಹೂವುಗಳಲ್ಲಿ
ಸಂಭ್ರಮವೇ ಮನೆ ಮಾಡಿತ್ತು

ಆಗಷ್ಟೇ ತಿಳಿಸದೆ ಬಂದೆ
ಹಾಗಾಗಿ ಹೂವುಗಳೆಲ್ಲ
ನಿನ್ನಂದ ಕಾಣುತ ಹಾಗೆ
ಮಂಕಾಗಿ ಚಿಂತಿಸೋ ಹೊತ್ತು 

ಏನಾಗಿ ಹೋಗುವೆ ನಾನು?
ಖುಷಿಯಲ್ಲಿ ಕಟ್ಟಿತು ಉಸಿರು
ಅಳಿಸೋದು ಕಷ್ಟದ ಕೆಲಸ
ಹಣೆಯಲ್ಲಿ ನಿನ್ನದೇ ಹೆಸರು

ಇರುಳೆಲ್ಲ ಕನಸಿನ ಸಂತೆ
ನಿನ್ನನ್ನು ಧ್ಯಾನಿಸುವಾಗ
ದಣಿವಾಗಿ ಸೋಲುವೆ ಏಕೋ
ಕಣ್ಣಲ್ಲಿ ನೀ ಕುಣಿದಾಗ

ಈಗಷ್ಟೇ ನಿಮಿಷದ ಹಿಂದೆ
ಆ ಚಿಟ್ಟೆ, ದುಂಬಿಗಳೆಲ್ಲ
ಈ ನನ್ನ ಮನಸೂ ಸೇರಿ
ಹೂವನ್ನೇ ಮೋಹಿಸುತಿತ್ತು!!

ಏನೊಂದೂ ಸೂಚನೆ ಕೊಡದೆ
ನೀನಿಟ್ಟೆ ಎದೆಗೆ ಕಾವು
ನೀನಿದ್ದರೆ ಅಲ್ಲಿಗೆ ಪ್ರಾಣ
ಇರದಿದ್ದರೆ ಖಂಡಿತ ಸಾವು

ಮುಗಿಲೆತ್ತರ ಹಾರುವೆ ನಾನು
ನೀ ನಕ್ಕರೆ ಸುಮ್ಮನೆ ಒಮ್ಮೆ
ನಿನ್ನೊಂದಿಗೆ ನಡೆಯುತಲಿದ್ದು
ಈ ನೆರಳಿಗೂ ಏನೋ ಹೆಮ್ಮೆ

ಈಗಷ್ಟೇ ನಿಮಿಷದ ಹಿಂದೆ
ಆ ಸೂರ್ಯ ಮುಳುಗುತಲಿದ್ದ
ಗಡಿಯಾರ ಮುಳ್ಳಿನ ಹೆಜ್ಜೆ
ಮುಂದಕ್ಕೇ ಇಕ್ಕುತಲಿತ್ತು....!!

                          -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...