Friday, 30 May 2014

ಪಾಪದ ಸ್ಪರ್ಧೆ (Race of sin)

ಇಲ್ಲಿ ಪಾಪಗಳ ಸ್ಪರ್ಧೆ ಏರ್ಪಟ್ಟಿದೆ;
ಸುತ್ತೂರು, ಜಿಲ್ಲೆ ಗಡಿಗಳ ದಾಟಿ
ದೇಶ-ವಿದೇಶಗಳಿಂದ ಆಗಮಿಸಿದ 
ಕಟ್ಟುಮಸ್ತು ಪಟುಗಳೆದುರಲ್ಲಿ
ನನ್ನ ಬಡಕಲು ಪಾಪಗಳು ಪಾಪಗಳಂತೆ
ಪಿಳಿ-ಪಿಳಿ ಕಣ್ಣರಳಿಸಿ ನೋಡುತ್ತಿವೆ;
ನಾನೊಬ್ಬ ಪಾಪಿಯೆಂದು ನಂಬಲಿಕ್ಕಾದರೂ
ಮತ್ತಷ್ಟು ಪಾಪ ಎಸಗಬೇಕಿದೆ!!

ಒಬ್ಬ ಪಾಪಿ ತನ್ನ ಪ್ರತಾಪ ಮೆರೆದ;
ತನ್ನ ಹಳೆ ಪಾಪದ ಚೀಲ ಬಿಚ್ಚಿ
ಒಂದೊಂದನ್ನೇ ಈಚೆಗಿಡುತ್ತಲೇ
ಸಂಪೂರ್ಣ ಬೆವೆತು ಹೋದ;
ಇನ್ನು ಲೆಕ್ಕ ಮಾತ್ರ ಮುಗಿದೇ ಇಲ್ಲ!!

ಮತ್ತೊಬ್ಬ, ತನದಲ್ಲದ ಕೊಡದಲ್ಲಿ
ತುಂಬಿ ತುಳುಕುತ್ತಿದ್ದ ಪಾಪದ ಹೊರೆಯ
ಅಸಹಾಯಕನಂತೆ ಹೊತ್ತು ದಣಿದಿದ್ದ;
ದಣಿಗಳು ದುಡಿಸಿಕೊಂಡು ದೂರಹಟ್ಟಿ, 
ಪಗಾರದ ನೆಪವೇರಿ ಹೊರಿಸಿರಬೇಕು?!!
ಎಂಬ ಗುಮಾನಿ ಆತನ ಕಣ್ಗಳಲ್ಲೇ 
ಸ್ಪಷ್ಟ ಗೋಚರಿಸುವಂತಿತ್ತು!!

ನಮೂದಿಸಿಕೊಂಡವರಲ್ಲಿ ಅನೇಕರು
ಯಾವ ಪಾಪ ಅರಿಯದವರಂತಿದ್ದರೂ
ನಿಯಮಾನುಸಾರ ಸೇರಿಸಿಕೊಳ್ಳಲೇ ಬೇಕಾಗಿತ್ತು;
ಓಟದಲ್ಲಿ ಬಂಡವಾಳ ಬಯಲಾಗುವುದಂತೂ ಖಚಿತ!!

ನಾನೂ ಭಾಗಿಯಾಗಿದ್ದೆ;
ಕಠಿಣವಲ್ಲದಿದ್ದರೂ 
ಸುಮಾರು ತಾಲೀಮು ನಡೆಸಿದ್ದ 
ಪಾಪಗಳ ಬೆಂಬಲವಿದ್ದಂತಿತ್ತು;
ಸಜ್ಜಾಗಿ ನಿಂತೆ, ಚಾಲನೆಯ ಸದ್ದಿಗೆ!!

ಓಟ ಮೊದಲಾಗಿತ್ತು,
ಕಣ್ಮುಚ್ಚಿ, ಒಂದೇ ಉಸಿರಲ್ಲಿ ಓಡಿದೆ;
ಎಲ್ಲರನ್ನೂ ಹಿಂದಿಕ್ಕುವ ಛಲ,
ನಾನೇ ಪರಮ ಪಾಪಿಯ ಬಿರುದು
ದೋಚಿಬಿಡುವ ಹುಮ್ಮಸ್ಸು;
ಎಲ್ಲವೂ ಹುಸಿಯಾಗುವ ಸೂಚನೆಗಳೇ!!

ಗುರಿ ಮುಟ್ಟುವುದು ತಡವಾದರೇನಂತೆ,
ಮುಟ್ಟುವುದಂತೂ ಗ್ಯಾರಂಟಿ!!

ಅಂದಹಾಗೆ; ಹುಸಿ ಹೊರೆ ಹೊತ್ತವರು
ಕಡೆಯಲ್ಲಿ ನಾಪತ್ತೆ;
ಅವರವರ ಪಾಪಗಳು
ಅವರವರ ಹೆಗಲೇರಿ ನಗುತ್ತಿದ್ದವು!!

ಅಬ್ಬಬ್ಬಾ ಅದೆಷ್ಟು ಪಾಪಿಗಳು ಜಗದೊಳಗೆ?!! 

                                         -- ರತ್ನಸುತ

1 comment:

  1. ಹುಸಿ ಹೊರೆ ಹೊತ್ತಂತೆ ನಟಿಸುವವರ ಪದ್ದತಿಯೇ ಹಾಗೆ! ಅವರಿಗಿಂತ ಪಲಾಯನಾವಾದಿಗಳಿಲ್ಲ ಗೆಳೆಯ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...