Friday 30 May 2014

ವಾರಾಂತ್ಯದ ಮುಂಜಾನೆ

ಕುರುಡು ಸ್ವಪ್ನಗಳ ಗರಡಿಯಲ್ಲಿ
ಇರುಳೆಲ್ಲ ಬೆವರು ಹರಿಸಿ ಎದ್ದೆ;
ಬಾಯಾರಿಕೆಯ ನೀಗಿಸಲು 
ಪಲ್ಲಂಗದ ಬದಿಗಿಟ್ಟಿದ್ದ 
ಚೊಂಬೂ ಬತ್ತಿ ಹೋಗಿತ್ತು;
ಹೇಗೆ?!!

ಹಾಸಿಗೆಯುದ್ದಕ್ಕೂ ಹರಡಿಕೊಂಡ
ನಿಚ್ಚಲ ಒಡಲೊಳಗಿನರಗಳು ಹಿಗ್ಗಿ
ಆಗಷ್ಟೇ ಸುಧಾರಿಸಿಕೊಳ್ಳುವಾಗ
ಥಟ್ಟನೆ ಪೋಲಿ ಸಂದೇಶವೊಂದು
ವಾಟ್ಸಾಪಿನ ಬಾಗಿಲ ಬಡಿಯುತ್ತೆ!!

ಹಳೆ ಸರಕುಗಳನ್ನ ಕೊನೆಬಾರಿಗೊಮ್ಮೆ
ಕಣ್ಣಾರೆ ಕಂಡು, ಮನಸಾರೆ ಆಸ್ವಾದಿಸಿ
ಅಳಿಸಿ ಹಾಕುವಾಗ
ಎಲ್ಲೋ ಒಂದು ಸಣ್ಣ ಮರುಕ;
ಹಿಂದೆಯೇ ನಿಟ್ಟುಸಿರು,
ಹೊಸ ಆಗಮನಕ್ಕೆ ವೇದಿಕೆ ಸಜ್ಜು!!

ತಲೆದಿಂಬಿನ ಅಂಚಿನ ಕಸೂತಿಯ
ಅರಿವಿಲ್ಲದಂತೆ ಕಿತ್ತು ಹಾಕಿ
ಮರು ಜೋಡಣೆಗೆ ಹೆಣಗಾಡುತ್ತೇನೆ;
ನನ್ನದೇ ಹುಚ್ಚು ಬಯಕೆಗಳಿಗೆ
ಬಲಿಯಾದವುಗಳ ನೆನೆನೆನೆದು
ಸುಮ್ಮನಾಗುತ್ತೇನೆ, ಸಣ್ಣಗಾಗುತ್ತೇನೆ!!

ಹಗಲನ್ನ ತಿರಸ್ಕಾರದಿಂದಲೇ ಒಪ್ಪಿಕೊಂಡು
ಇರುಳನ್ನ ಬಿಡದಂತೆ ಬಿಗಿಯಾಗಿ 
ಅಪ್ಪಿಕೊಳ್ಳುವ ಯೋಜನೆಯಲ್ಲಿ
ನಗುವ ಸಧ್ಯತೆಗಳ ಹೆಚ್ಚಿಸುತ್ತ
ಮರುಳನಂತೆ ನಕ್ಕು ಬಿಡುತ್ತೇನೆ;
ಶರಪಂಜರದ ಕಲ್ಪನಾಳಂತೆ
ಚೂರು ಅಸಹಜವಾಗಿಯೇ!!

ಯಾವ ಹುಚ್ಚು ನಾಯಿಯೂ
ನನ್ನನ್ನು ಕಚ್ಚಿದ ನೆನಪಿಲ್ಲ;
ರೇಬೀಸ್ ಖಾಯಿಲೆಯ ಲಕ್ಷಣವೆಂಬಂತೆ
ನೀರ ಕಂಡು ಹಿಂಜರಿವ ಬುದ್ಧಿ;
ಸ್ನಾನದ ವಿಷಯದಲ್ಲಂತೂ ಇದನ್ನ
ತಳ್ಳಿ ಹಾಕಲಾಗುತ್ತಿಲ್ಲ ನನಗೆ;
ಆದರೂ 
ಮನೆಯವರ ಒತ್ತಾಯಕ್ಕೆ ಮಣಿಯದೆ
ಬೇರೆ ದಾರಿಯಿಲ್ಲ!!

                                  -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...