Tuesday, 6 May 2014

ಅನುಭಾವ

ಮಳೆ ಹನಿಗೆ ಹಿಡಿದೆ
ತೆಂಗಿನ ಗರಿಯ
ಕಂಬನಿಗೆ ಹಿಡಿವೆ ಅಂಗೈಯ್ಯನು;
ಇನಿದನಿಗೆ ಹಿಡಿದೆ
ಈ ನನ್ನ ಕಿವಿಯ
ಮಾರ್ದನಿಗೆ ಕೊಡುವೆ ಹೃದಯವನ್ನು!!

ಕಡುಗಪ್ಪು ಬರಣಿ
ಒಪ್ಪುವುದು ಕಣ್ಣ
ಮೆದುವಾಗಿ ಅದ್ದು ಕಿರುಬೆರಳನು;
ವಿಸ್ತಾರವನ್ನೂ 
ಬೆಳಗುತ್ತ ಬರಲಿ
ಹದವಾಗಿ ಹರಡು ಕಣ್ಣೆವೆಯನು!!

ಮನಸಲ್ಲಿ ಜಾಗ
ಇರಿಸುತ್ತ ಈಗ
ದೈನಿಕ ಸಂತೆ ತೆರೆದು ಬಿಡುವೆ;
ಎಲ್ಲ ದುಬಾರಿ
ಆಭರಣಗಳಿಗೆ
ನೂರರ ಕಡಿತ ನಿನ್ನ ಸಲುವೇ!!

ಕನಸಲ್ಲಿ ಒಂದು
ಬೆಳಕಾಗಿ ಬಂದು
ನೆರಳಾಟಕೆ ನಾಂದಿ ಹಾಡುವಾಸೆ;
ಹೊಗಳೋಕೂ ಮುನ್ನ
ಹೆಗಲನ್ನ ಪಡೆವೆ
ಕೈ ಹಿಡಿಯಲಿ ನನ್ನ ಕರ್ಮ ಭಾಷೆ!!

ನಗುವಲ್ಲಿ ಸಿಲುಕಿ
ಎದೆಯಲ್ಲಿ ಗಿಲಕಿ
ಗಲ್ಲೆಂದು ಗುಲ್ಲೆಬ್ಬಿಸೋ ಹಾಗಿದೆ;
ಒಲವನ್ನು ಕೆದಕಿ
ಕೈಯ್ಯನ್ನು ಕುಲುಕಿ
ಒಪ್ಪಂದವ ಮುಗಿಸಿ ಬಿಡಬಾರದೇ?!!

                              -- ರತ್ನಸುತ

1 comment:

  1. ’ಮೆದುವಾಗಿ ಅದ್ದು ಕಿರುಬೆರಳ’ ಪ್ರಯೋಗವು ನಮಗೆ ಎಲ್ಲಿಗೋ ತೇಲಿಸಿತು.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...